ಬೆಂಗಳೂರು, ಡಿ 17 (DaijiworldNews/MS): ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದ ಪಡಬೇಕು ಎಂದು ವಿಧಾನಸಭೆ ಅಧಿವೇಶನದಲ್ಲಿ ತಾವು ನೀಡಿದ್ದ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು ಕ್ಷಮೆ ಕೋರಿದ್ದಾರೆ.
ಸದನದಲ್ಲಿ ಅತಿವೃಷ್ಟಿ ಕುರಿತು ಮಾತನಾಡುತ್ತಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಎಲ್ಲರೂ ಮಾತನಾಡಬೇಕು ಎನ್ನುತ್ತಾರೆ ಆದರೆ ಇದು ನಿಮ್ಮದೇ ಸದನ, ಈಗ ನನ್ನ ಪರಿಸ್ಥಿತಿ ಹೇಗಾಗಿದೆ ಅಂದರೆ ಲೆಟ್ಸ್ ಎಂಜಾಯ್ದ ಸಿಚುಯೇಷನ್ ಅನ್ನೋ ರೀತಿ ಆಗಿದೆ ರಮೇಶ್ ಕುಮಾರ್ ಅವರೇ’ ಎಂದು ಹೇಳಿದರು.
ಈ ವೇಳೆ ತಮ್ಮ ಹೆಸರು ಪ್ರಸ್ತಾಪಿಸಿದ್ದಕ್ಕೆ ಎದ್ದು ನಿಂತು ಪ್ರತಿಕ್ರಿಯಿಸಿದ ರಮೇಶ್ ಕುಮಾರ್ , ದೆರ್ ಈಸ್ ಎ ಸೇಯಿಂಗ್, ವೆನ್ ರೇಪ್ ಈಸ್ ಇನೆವಿಟೆಬಲ್ ಲೆಟ್ ಲೇಡೌನ್ ಅಂಡ್ ಎಂಜಾಯ್( ರೇಪ್ ಆಗುವಾಗ ತಡೆಯಲು ಆಗದಿದ್ದರೆ ಮಲಗಿಕೊಂಡು ಎಂಜಾಯ್ ಮಾಡಬೇಕು) ಎಂದು ಹೇಳಿದ್ದರು. ಇದಕ್ಕೆ ಸ್ವೀಕರ್ ನಕ್ಕುಬಿಟ್ಟಿದ್ದರು.
ಇಂತಹ ಹೇಳಿಕೆಗಳು ಬಂದರೂ ಸದನದಲ್ಲಿದ್ದ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಈ ಹೇಳಿಕೆ ಸಹಜ ವಿದ್ಯಮಾನ ಎನ್ನುವಂತೆ ವರ್ತಿಸಿದರು.
ಆದರೆ ಇದು ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಗುರುವಾರ ರಾತ್ರಿ ಟ್ವೀಟ್ ಮಾಡಿರುವ ರಮೇಶ್ ಕುಮಾರ್ ಅವರು " ತಮ್ಮ ಹೇಳಿಕೆಗೆ ಎಲ್ಲರಲ್ಲಿಯೂ ಕ್ಷಮೆಯಾಚಿಸುತ್ತೇನೆ. ಮುಂದೆ ನಾನು ನನ್ನ ಮಾತುಗಳಲ್ಲಿ ಎಚ್ಚರ ವಹಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.