ಭೋಪಾಲ, ಡಿ.17 (Daijiworld/PY): ಮಧ್ಯಪ್ರದೇಶದಲ್ಲಿ 80 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಒಂದು ವರ್ಷದ ಹೆಣ್ಣು ಮಗುವನ್ನು ಪೊಲೀಸರು ಹಾಗೂ ಎಸ್ಡಿಇಆರ್ಎಫ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ.
ಛತ್ತರ್ಪುರ ಜಿಲ್ಲೆಯ ಗೌಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
"ಡಿ.16ರ ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಕೊಳವೆ ಬಾವಿಗೆ ಬಿದ್ದಿದ್ದ ದಿವ್ಯಾಂಶಿ ಎನ್ನುವ ಮಗುವನ್ನು 10 ಗಂಟೆ ನಡೆದ ಸತತ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ. ಕೊಳವೆ ಬಾವಿಯಿಂದ ಮಗುವನ್ನು ಹೊರ ತರಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ" ಎಂದು ಛತ್ತರ್ಪುರ ಜಿಲ್ಲಾಧಿಕಾರಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
"ತಾಯಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಆಟವಾಡಿಕೊಂಡಿದ್ದ ದಿವ್ಯಾಂಶಿ ಇದ್ದಕ್ಕಿಂದ್ದಂತೆ ಕಾಣೆಯಾಗಿದ್ದಳು. ಈ ಸಂದರ್ಭ ಹುಡುಕಾಟ ನಡೆಸಿದಾಗ ಮಗು ತೆರೆದ ಕೊಳವೆ ಬಾವಿಗೆ ಬಿದ್ದಿದ್ಧಾಳೆ ಎಂದು ತಿಳಿದುಬಂದಿದೆ" ಎಂದು ಪೊಲೀಸರು ಹೇಳಿದ್ದಾರೆ.
ಮಗುವಿನ ತಾಯಿಯ ಕಿರುಚಾಟವನ್ನು ಕೇಳಿದ ಸ್ಥಳೀಯರು ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. 80 ಅಡಿ ಆಳದ ಕೊಳವೆ ಬಾವಿಯ ಸುಮಾರು 15 ಅಡಿ ಆಳದಲ್ಲಿ ದಿವ್ಯಾಂಶಿ ಸಿಲುಕಿಕೊಂಡಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಪೊಲೀಸರಿಗೆ ಕೊಳವೆ ಬಾವಿಯೊಳಗಿನಿಂದ ಮಗುವಿನ ಅಳು ಕೇಳಿಸಿದ್ದು, ಕೂಡಲೇ ಆಕ್ಸಿಜನ್ ಬೆಂಬಲ ಒದಗಿಸಿದ್ದಾರೆ. ನಂತರ ಎಸ್ಡಿಇಆರ್ಎಫ್ ತಂಡ ಕಾರ್ಯಾಚರಣೆ ಕೈಗೊಂಡಿದ್ದು, ಕೊಳವೆ ಬಾವಿಗೆ ಸಿಸಿಟಿವಿ ಅಳವಡಿಸಿ, ಮಗುವಿನ ಚಲನೆಯನ್ನು ಗಮನಿಸಲಾಯಿತು.
ಬಳಿಕ ಜೆಸಿಬಿ ಯಂತ್ರಗಳನ್ನು ಬಳಸಿ ಕೊಳವೆ ಬಾವಿಗೆ ಸಮಾನಾಂತರವಾಗಿ ಗುಂಡಿ ತೆಗೆದು ಬಾಲಕಿಯನ್ನು ರಕ್ಷಿಸಲಾಯಿತು.