ತಿರುವನಂತಪುರ, ಡಿ.16 (Daijiworld/PY): "ಕೇರಳದಲ್ಲಿ ಐದು ಒಮ್ರಿಕಾನ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ವಿಶೇಷವಾಗಿ ವಿಮಾನ ನಿಲ್ದಾಣಗಳಲ್ಲಿ ಹಾಗೂ ಬಂದರುಗಳಲ್ಲಿ ಸ್ಕ್ರೀನಿಂಗ್ ಹೆಚ್ಚಿಸಲಾಗುವುದು" ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೇರಳದ ಒಮಿಕ್ರಾನ್ ರೋಗಿಯು ಡಿಸೆಂಬರ್ 8 ರಂದು ಪಾಸಿಟಿವ್ ಪರೀಕ್ಷೆ ನಡೆಸಿದ್ದರು. ಅವರು ಯುಕೆಯಿಂದ ರಾಜ್ಯಕ್ಕೆ ಮರಳಿದ್ದರು" ಎಂದು ತಿಳಿಸಿದ್ದಾರೆ.
"ಮತ್ತೋರ್ವ ಕೊಚ್ಚಿ ಮೂಲದ ವ್ಯಕ್ತಿಯಾಗಿದ್ದು, ಅವರು ಕಾಂಗೋದಿಂದ ಬಂದವರಾಗಿದ್ದಾರೆ. ರಾಜ್ಯ ಅಪಾಯದಲ್ಲಿರುವ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ತಿರುವನಂತಪುರದಲ್ಲಿ ಐದನೇ ಪ್ರಕರಣ ಪತ್ತೆಯಾಗಿದೆ" ಎಂದಿದ್ದಾರೆ.
"ನಾವು ಕೊರೊನಾ ಪರೀಕ್ಷೆ ಹಾಗೂ ಸ್ಕ್ರೀನಿಂಗ್ ಅನ್ನು ಹೆಚ್ಚಿಸಲು ತೀರ್ಮಾನಿಸಿದ್ದೇವೆ. ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಬೃಹತ್ ಲಸಿಕೆ ಅಭಿಯಾನ ಕೈಗೊಳ್ಳಲಾಗುವುದು. ಎರಡನೇ ಡೋಸ್ ಪಡೆಯದವರು ಶೀಘ್ರವಾಗಿ ಲಸಿಕೆ ಪಡೆಯಬೇಕು" ಎಂದು ತಿಳಿಸಿದ್ದಾರೆ.
"ಡಿ.1ರಿಂದ ವಿವಿಧ ವಿಮಾನ ನಿಲ್ದಾಣಗಳ ಮೂಲಕ 1,47,844 ಮಂದಿ ರಾಜ್ಯಕ್ಕೆ ಆಗಮಿಸಿದ್ದಾರೆ. ಈ ಪೈಕಿ 8,920 ಮಂದಿಯನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಲಾಗಿದೆ. ಇದರಲ್ಲಿ 15 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇವರಲ್ಲಿ 13 ಮಂದಿ ಹೆಚ್ಚಿನ ಅಪಾಯಗಳಿರುವ ದೇಶದಿಂದ ಬಂದವರಾಗಿದ್ದಾರೆ. ಎಲ್ಲಾ ಮಾದರಿಗಳನ್ನು ಜೀನೋಮಿಕ್ ಸೀಕ್ವೆನ್ಸಿಂಗ್ಗಾಗಿ ಕಳುಹಿಸಲಾಗಿದೆ. ಇಲ್ಲಿಯವರೆಗೆ, ಎಲ್ಲಾ 54 ಮಾದರಿಗಳಲ್ಲಿ ಜೀನೋಮಿಕ್ ಸೀಕ್ವೆನ್ಸಿಂಗ್ಗೆ ಕಳುಹಿಸಲಾಗಿದೆ ಹಾಗೂ 44 ಫಲಿತಾಂಶಗಳು ಬಂದಿವೆ . 5 ಒಮಿಕ್ರಾನ್ ಪ್ರಕರಣಗಳಾಗಿದ್ದು, ಉಳಿದವು ಡೆಲ್ಟಾ ವೈರಸ್ ಆಗಿವೆ" ಎಂದಿದ್ದಾರೆ.