ಬೆಳಗಾವಿ, ಡಿ.16 (Daijiworld/PY): ಭ್ರಷ್ಟಾಚಾರ ಜನಕ ಕಾಂಗ್ರೆಸ್ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು, "ಸಿ ಟಿ ರವಿ ಓರ್ವ ಲೂಟಿ ರವಿ. ನನ್ನ ವಿರುದ್ದ ನೀನು ಏನು ಆರೋಪ ಮಾಡುವುದು" ಎಂದು ಕಿಡಿಕಾರಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, "ನನ್ನ ವಿರುದ್ದ ಈ ಲೂಟಿ ರವಿ ಮಾತನಾಡಿ ದೊಡ್ಡ ಲೀಡರ್ ಆಗಬೇಕು ಎಂದಿಕೊಂಡಿದ್ದಾರೆ. ಈ ಲೂಟಿ ರವಿ ಹೇಗಿದ್ದ ಎನ್ನುವುದನ್ನು ಹೇಳಲಿ" ಎಂದು ಸವಾಲು ಹಾಕಿದ್ದಾರೆ.
ಚಳಿಗಾಲದ ಅಧಿವೇಶನಕ್ಕೂ ಮುನ್ನ ಬೆಳಗಾವಿಯ ಸುವರ್ಣಸೌಧದ ಮುಂದೆ ಕೈ ನಾಯಕರು ಪರ್ಸೆಂಟೇಜ್ ಸರ್ಕಾರ ಎಂದು ಬಿಜೆಪಿ ಸರ್ಕಾರದ ವಿರುದ್ದ ಹರಿಹಾಯ್ದು ಟ್ರ್ಯಾಕ್ಟರ್ ರ್ಯಾಲಿ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ರ್ಯಾಕ್ಟರ್ ಸುವರ್ಣಸೌಧ ಪ್ರವೇಶಿಸಲು ಪೊಲೀಸರು ಅನುಮತಿ ನಿರಾಕರಿಸುತ್ತಿದ್ದಂತೆ ಆಕ್ರೋಶ ವಿಕೋಪಕ್ಕೆ ತಿರುಗಿತ್ತು. ವಿಪಕ್ಷ ನಯಕ ಸಿದ್ದರಾಮಯ್ಯ ಅವರು ಸ್ಪೀಕರ್ ವಿಶ್ವೇಶ್ವರಯ್ಯ ಕಾಗೇರಿ ಅವರಿಗೆ ಕರೆ ಮಾಡಿ ಟ್ರ್ಯಾಕ್ಟರ್ ಸಮೇತ ಸುವರ್ಣಸೌಧಕ್ಕೆ ತೆರಳಲು ಅನುಮತಿ ಪಡೆದುಕೊಂಡಿದ್ದರು. ನಂತರ ಕೈ ನಾಯಕರು ಸುವರ್ಣ ಸೌಧದ ಒಳಗೆ ಪ್ರವೇಶಿಸಿದ್ದಾರೆ.