ಬೆಂಗಳೂರು, ಡಿ16 (DaijiworldNews/MS): ನಾವು ಏನು ಬೇಕಾದರೂ ಮಾಡ್ತೀವಿ ಇವರ್ಯಾರು ಕೇಳೋಕೆ ಎಂಬ ವಿಪಕ್ಷ ನಾಯಕ ಸಿದ್ಧರಾಮಯ್ಯ ಮಾತಿಗೆ ಸಿಡಿಮಿಡಿಕೊಂಡಿರುವ ಬಿಜೆಪಿ , ಹೇಗೆ ಬೇಕಾದರೂ ಸದನಕ್ಕೆ ಬರುತ್ತೇವೆ ಎನ್ನಲು ಅದೇನು ಕೆಪಿಸಿಸಿ ಕಛೇರಿಯಲ್ಲ ಎಂದು ತಿರುಗೇಟು ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ , "ಸುವರ್ಣಸೌಧದ ಎದುರು ದಾಂಧಲೆಗೆ ಪ್ರೇರಣೆ ನೀಡಿ ಸಂಸದೀಯ ನಿಯಮಾವಳಿಗಳನ್ನು ದುರುಪಯೋಗಪಡಿಸಿಕೊಂಡು ರಕ್ಷಣೆ ಪಡೆಯಲು ಸಿದ್ದರಾಮಯ್ಯ ಹೊರಟಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಸಂವಿಧಾನ, ಸದನದ ಮೇಲೆ ಕಿಂಚಿತ್ ಗೌರವವೂ ಇಲ್ಲವಾಗಿದೆ ಎಂದು ಆರೋಪಿಸಿದೆ.
ಮಾನ್ಯ ಸಿದ್ದರಾಮಯ್ಯ ಅವರೇ, ಹಕ್ಕುಚ್ಯುತಿ ಎಂದರೇನೆಂದು ಸ್ವಲ್ಪ ನಿಯಮ ಪುಸ್ತಕ ತೆರೆದು ನೋಡಿ. ನೀವು ಕಾನೂನು - ಸುವ್ಯವಸ್ಥಗೆ ಧಕ್ಕೆ ತರುವುದಕ್ಕಾಗಿಯೇ ಮಾಡುವ ಅನಗತ್ಯ ಸಂಗತಿಗಳನ್ನು ಸದನದದಲ್ಲಿ ಪ್ರಸ್ತಾಪಿಸಲು ಹೇಗೆ ಸಾಧ್ಯ? ಹೇಗೆ ಬೇಕಾದರೂ ಸದನಕ್ಕೆ ಬರುತ್ತೇವೆ ಎನ್ನಲು ಅದೇನು ಕೆಪಿಸಿಸಿ ಕಛೇರಿಯಲ್ಲ ಎಂದು ಕಿಡಿಕಾರಿದೆ.
ಸುವರ್ಣ ಸೌಧದೊಳಗೆ ಟ್ರ್ಯಾಕ್ಟರ್ ನುಗ್ಗಿಸಲು ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ.ದೆಹಲಿಯ ಕೆಂಪುಕೋಟೆಯಲ್ಲೂ ಕಾಂಗ್ರೆಸ್ ಪ್ರೇರಿತ ಪ್ರತಿಭಟನೆ ಇದೇ ಮಾದರಿಯಲ್ಲಿ ನಡೆದಿತ್ತು. ಅದೇ ಮಾದರಿಯನ್ನು ಇಂದು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ಸಿಗರೇ, ಅಂದು ಕೆಂಪುಕೋಟೆಯೊಳಗೆ ನುಗ್ಗಿದ ಭಯೋತ್ಪಾದಕರಿಗೂ ನಿಮಗೂ ಏನು ವ್ಯತ್ಯಾಸ? ಎಂದು ಪ್ರಶ್ನಿಸಿದೆ.
ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಟ್ರ್ಯಾಕ್ಟರ್ ಮೂಲಕವೇ ಸುವರ್ಣ ಸೌಧದ ಒಳಗೆ ಪ್ರವೇಶಿಸೋದಕ್ಕೆ ಮುಂದಾದಾಗ ಪೊಲೀಸರು ಬ್ಯಾರಿಗೇಡ್ ಹಾಕಿ ತಡೆದಿದ್ದು ಇದು ಸುವರ್ಣ ಸೌಧದ ಮುಂದೆ ಹೈಡ್ರಾಮ ಸೃಷ್ಠಿಗೆ ಕಾರಣವಾಗಿತ್ತು. ಪೊಲೀಸರು ತಡೆದ ವಿಚಾರವಾಗಿ ಕಿಡಿಕಾರಿದ ವಿಪಕ್ಷ ನಾಯಕ ಸಿದ್ಧರಾಮಯ್ಯ ಎಸ್ಪಿ ವಿರುದ್ಧ ಕಿಡಿಕಾರಿದ್ದರು. ನಾವು ವಿಧಾನಸೌಧದದ ಒಳಗೆ ಹೋಗೋದಕ್ಕೆ ಬಿಡೋದಿಲ್ಲ ಎನ್ನೋದಕ್ಕೆ ಇವರಾರು.? ನಾವು ಹೇಗೆ ಬೇಕಾದರೂ ಬರುತ್ತಿವಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.