ನವದೆಹಲಿ, ಡಿ.16 (Daijiworld/PY): ಹೆಣ್ಣು ಮಕ್ಕಳ ವಿವಾಹದ ಕನಿಷ್ಠ ವಯಸ್ಸನ್ನು 18 ರಿಂದ 21ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
2020ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ರಾಷ್ಟ್ರವನ್ನುದ್ಧೇಶಿಸಿ ಭಾಷಣ ಮಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದರು.
ಹೆಣ್ಣುಮಕ್ಕಳ ಆರೋಗ್ಯದ ವಿಚಾರವಾಗಿ ಸರ್ಕಾರ ಬದ್ದವಾಗಿದೆ. ಹೆಣ್ಣುಮಕ್ಕಳನ್ನು ಅಪೌಷ್ಟಿಕತೆಯಿಂದ ರಕ್ಷಿಸುವುದು ಸರ್ಕಾರ ಉದ್ದೇಶವಾಗಿದೆ. ಸರಿಯಾದ ವಯಸ್ಸಿಗೆ ಅವರು ವಿವಾಹವಾಗುವುದು ಸೂಕ್ತ ಎಂದಿದ್ದಾರೆ.
ಗಂಡುಮಕ್ಕಳಿಗೆ ನಿಗದಿಪಡಿಸಲಾಗಿರುವ ವಿವಾಹದ ವಯಸ್ಸು 21 ಹಾಗೂ ಹೆಣ್ಣುಮಕ್ಕಳಿಗೆ 18 ವರ್ಷ. ಈ ಹಿನ್ನೆಲೆ ಹೊಸ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಬಾಲ್ಯವಿವಾಹ ನಿಷೇಧ ಕಾಯ್ದೆ, ವಿಶೇಷ ವಿವಾಹ ಕಾಯ್ದೆ ಹಾಗೂ ಹಿಂದೂ ವಿವಾಹ ಕಾಯ್ದೆಗಳಲ್ಲಿ ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ.
ಈ ಸಂಬಂಧ ಜಯಾ ಜೇಟ್ಲಿ ನೇತೃತ್ವದ ನೀತಿ ಆಯೋಗದ ಕಾರ್ಯಪಡೆ ಪ್ರಸ್ತಾವನೆ ಸಲ್ಲಿಸಿದೆ. ಕಳೆದ ವರ್ಷದ ಜುಲೈನಲ್ಲಿ ವಿ ಕೆ ಪೌಲ್, ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು, ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯ, ಕಾನೂನು ಸಚಿವಾಲಯದ ಸದಸ್ಯರನ್ನೊಳಗೊಂಡ ಟಾಸ್ಕ್ ಫೋರ್ಸ್ ಅನ್ನು ಕೇಂದ್ರ ರಚನೆ ಮಾಡಿತ್ತು.