ಕಾರವಾರ, ಡಿ.16 (DaijiworldNews/PY): ಚಲಿಸುತ್ತಿದ್ದ ಖಾಸಗಿ ಬಸ್ವೊಂದು ಹೆದ್ದಾರಿಯಲ್ಲಿಯೇ ಹೊತ್ತಿ ಉರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಜೋಡುಕೆರೆ ಬಳಿಯ ಹೆದ್ದಾರಿ 63ರಲ್ಲಿ ನಡೆದಿದೆ.
ಬಸ್ಗೆ ಬೆಂಕಿ ಆವರಿಸುವ ಮುನ್ನವೇ ಚಾಲಕ ಗಮನಿಸಿದ್ದು, ಕೂಡಲೇ ಬಸ್ನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಯುವಂತೆ ತಿಳಿಸಿದ್ದು, ಎಲ್ಲಾ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಮುಂಬೈನಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್ನಲ್ಲಿ ಯಲ್ಲಾಪುರದ ಜೋಡಕೆರೆ ಬಳಿ 5 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ತಕ್ಷಣವೆ ಬಸ್ ಅನ್ನು ರಸ್ತೆ ಬದಿ ನಿಲ್ಲಿಸಿ, ಕೂಡಲೇ ಬಸ್ನಲ್ಲಿದ್ದ ಪ್ರಯಾಣಿಕರಿಗೆ ಮಾಹಿತಿ ನೀಡಿ, ಕೆಳಗೆ ಇಳಿಸಿದ್ದಾರೆ.
ತಾಂತ್ರಿಕ ದೋಷದ ಕಾರಣದಿಂದ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮಾಹಿತಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ ಸಂದರ್ಭ ಬಸ್ ಅರ್ಧದಷ್ಟು ಸುಟ್ಟು ಭಸ್ಮವಾಗಿತ್ತು. ಬಳಿಕ ಬಸ್ಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿದ್ಧಾರೆ.
ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.