ಲಕ್ನೋ, ಡಿ16 (DaijiworldNews/MS): ಹುತಾತ್ಮನಾಗಿರುವ ಯೋಧನ ತಂಗಿಯ ವಿವಾಹವನ್ನು ಅಣ್ಣನ ಸ್ಥಾನದಲ್ಲಿ ನಿಂತು ಯೋಧರೇ ಮುಂದೆ ನಿಂತು ಮಾಡಿಸಿ ಗೆಳೆಯನ ಆಸೆಯನ್ನು ನೆರವೇರಿಸಿದ ಹೃದಯಸ್ಪರ್ಶಿ ಘಟನೆ ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ನಡೆದಿದೆ.
2019ರ ಫೆಬ್ರುವರಿ 14ರಂದು ಪುಲ್ವಾಮಾದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಹುತಾತ್ಮರಾದ ಯೋಧ ಶೈಲೇಂದ್ರ ಪ್ರತಾಪ್ ಸಿಂಗ್ ಅವರ ಸಹೋದರಿಯ ಮದುವೆಯನ್ನು ಖುದ್ದು ಸಿಆರ್ಪಿಎಫ್ ಯೋಧರೇ ಸೋದರ ಸ್ಥಾನದಲ್ಲಿ ಮುಂದೆ ನಿಂತು ಮಾಡಿಸಿಕೊಟ್ಟಿದ್ದಾರೆ.
ಮದುವೆಯ ದಿನ ಬೆಳಗ್ಗೆಯೇ ಸಮವಸ್ತ್ರ ಧರಿಸಿದ್ದ ಸಿಆರ್ಪಿಎಫ್ ಯೋಧರ ದಂಡೊಂದು ವಧುವನ್ನು ಮಂಟಪಕ್ಕೆ ಕರೆತರುವ ಮೂಲಕ ಸಹೋದರನನ್ನು ಕಳೆದುಕೊಂಡಿರುವ ಭಾವನೆ ಈ ಮದುಮಗಳಿಗೆ ಬರದಂತೆ ನೋಡಿಕೊಂಡರು. ಖುದ್ದು ಮುಂದೆ ನಿಂತು ಎಲ್ಲ ಜವಾಬ್ದಾರಿಯನ್ನೂ ಅಚ್ಚುಕಟ್ಟಾಗಿ ನಿಭಾಯಿಸಿ ವಿವಾಹ ಕಾರ್ಯವನ್ನು ನಡೆಸಿಕೊಟ್ಟರು.
'ಹುತಾತ್ಮ ಯೋಧ ಶೈಲೇಂದ್ರ ಪ್ರತಾಪ್ ಸಿಂಗ್ ಅವರ ಸಹೋದರಿಯ ವಿವಾಹ ಕಾರ್ಯಕ್ರಮದಲ್ಲಿ ಹಿರಿಯ ಸಹೋದರರಾಗಿ ಸಿಆರ್ಪಿಎಫ್ ಯೋಧರು ಪಾಲ್ಗೊಂಡಿದ್ದರು' ಎಂಬ ಶೀರ್ಷಿಕೆ ಇರುವ ಮದುವೆ ಫೋಟೋಗಳನ್ನು ಸಿಆರ್ಪಿಎಫ್ ತನ್ನ ಅಧಿಕೃತ ಟ್ವಿಟರ್ನಲ್ಲಿ ಶೇರ್ ಮಾಡಿದೆ.
ಯೋಧರ ಈ ಕಾರ್ಯವನ್ನು ಕಂಡು ಸಿಂಗ್ ಅವರ ಪಾಲಕರು ಭಾವುಕರಾದರು. 'ನನ್ನ ಮಗ ಈಗ ಈ ಜಗತ್ತಿನಲ್ಲಿಲ್ಲ. ಆದರೆ ಈ ಎಲ್ಲಾ ಯೋಧರ ರೂಪದಲ್ಲಿ ನಾವು ಅನೇಕ ಮಕ್ಕಳನ್ನು ನಾವು ಹೊಂದಿದ್ದೇವೆ ಎನಿಸುತ್ತಿದೆ. ಕಷ್ಟ, ಸುಖದ ಸಂದರ್ಭದಲ್ಲಿ ಎಲ್ಲರೂ ನಮ್ಮೊಟ್ಟಿಗಿರುತ್ತಾರೆ' ಎಂದು ಸಿಂಗ್ ಅವರ ತಂದೆ ನುಡಿದಿದ್ದಾರೆ.