ನವದೆಹಲಿ, ಡಿ 15 (DaijiworldNews/MS): ಕರಾವಳಿ ಮೂಲದ , ಮುಂಬೈ ನಲ್ಲಿ ಗ್ಯಾಂಗ್ ಸ್ಟಾರ್ ಆಗಿದ್ದ ಸುರೇಶ್ ಪೂಜಾರಿಯನ್ನು ಫಿಲಿಪೈನ್ಸ್ ದೇಶದಿಂದ ಹಸ್ತಾಂತರಿಸಿಲಾಗಿದ್ದು , ನಿನ್ನೆ (ಮಂಗಳವಾರ )ರಾತ್ರಿ ಭಾರತಕ್ಕೆ ಕರೆತರಲಾಗಿದೆ. ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಐಬಿ ಮತ್ತು ಸಿಬಿಐ ಅಧಿಕಾರಿಗಳು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಂಡರ್ವರ್ಲ್ಡ್ ಡಾನ್ ಛೋಟಾ ರಾಜನ್ ಹಾಗೂ ರವಿ ಪೂಜಾರಿ ಸಹಚರನಾಗಿ ಬಳಿಕ ತನ್ನದೇ ನಟೋರಿಯಸ್ ಗ್ಯಾಂಗ್ ಕಟ್ಟಿಕೊಂಡು ಮುಂಬೈನಲ್ಲಿ ಬಾರ್ ಮಾಲೀಕರಿಂದ, ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದ ಗ್ಯಾಂಗ್ ಸ್ಟಾರ್ ಸುರೇಶ್ ಪೂಜಾರಿ ಮುಂಬೈ ಬಳಿಯ ಥಾಣೆ, ಕಲ್ಯಾಣ್, ಉಲ್ಲಾಸನಗರ ಮತ್ತು ಡೊಂಬಿವಿಲಿಯಲ್ಲಿ ನಡೆದ ಸುಲಿಗೆ ಪ್ರಕರಣಗಳಲ್ಲಿ ಬೇಕಾಗಿದ್ದ.
ದೆಹಲಿಗೆ ಕರೆತಂದ ಬಳಿಕ ಪೂಜಾರಿಯನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದ್ದು, ಆ ಬಳಿಕ ಆತನನ್ನು ಮುಂಬೈ ಪೊಲೀಸರಿಗೆ ಕಸ್ಟಡಿಗೆ ಒಪ್ಪಿಸುವ ಸಾಧ್ಯತೆ ಇದೆ.
ಬಾಲಕನಾಗಿದ್ದಾಗಲೇ ಹೋಟೆಲ್ ಕೆಲಸಕ್ಕೆಂದು ಮುಂಬೈಗೆ ತೆರಳಿದ್ದ ಸುರೇಶ್, ಕೆಲ ವರ್ಷಗಳ ಬಳಿಕ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದ. ಈ ಸಂದರ್ಭ ರವಿ ಪೂಜಾರಿಯ ಸಂಪರ್ಕಕ್ಕೆ ಬಂದಿದ್ದ. ಬಳಿಕ ಛೋಟಾ ರಾಜನ್ ಜತೆಗೂ ಗುರುತಿಸಿಕೊಂಡಿದ್ದ. ಒಂದು ದಶಕದ ಹಿಂದೆ, ತನ್ನದೇ ಆದ ಗ್ಯಾಂಗ್ ರಚಿಸಿ ಭೂಗತ ಲೋಕದ ಚಟುವಟಿಕೆಯಲ್ಲಿ ತೊಡಗಿದ್ದ. 2007ರಲ್ಲಿ ಮುಂಬೈ ಬಿಟ್ಟು ವಿದೇಶಕ್ಕೆ ತೆರಳಿದ್ದ ಸುರೇಶ್ ಪೂಜಾರಿ ಅಲ್ಲಿಂದಲೇ ತನ್ನ ಸಹಚರರ ಮೂಲಕ ಕೆಲಸ ಮಾಡಿಸುತ್ತಿದ್ದ. ಈ ನಡುವೆ 2019 ರಲ್ಲಿ ಗ್ಯಾಂಗ್ ಸ್ಟಾರ್ ರವಿ ಪೂಜಾರಿಯನ್ನು ಸೆನೆಗಲ್ನಲ್ಲಿ ಪತ್ತೆ ಹಚ್ಚಿ ಭಾರತಕ್ಕೆ ಕರೆತರಲಾಗಿತ್ತು.
ಸುರೇಶ್ ಪೂಜಾರಿ ವಿರುದ್ಧ ಥಾಣೆ ಮತ್ತು ಮುಂಬೈ ಪೊಲೀಸರು ರೆಡ್ ಕಾರ್ನರ್ ನೋಟಿಸ್ ನೀಡಿದ್ದು ಇದರ ಆಧಾರದ ಮೇಲೆ ಅಕ್ಟೋಬರ್ನಲ್ಲಿ ಫಿಲಿಪೈನ್ಸ್ನಲ್ಲಿ ಅಧಿಕಾರಿಗಳು ಆತನನ್ನು ಪತ್ತೆಹಚ್ಚಿದ್ದರು. 2021ರ ಅಕ್ಟೋಬರ್ನಲ್ಲಿ ಫಿಲಿಪೈನ್ಸ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.
ಮುಂಬೈನಲ್ಲಿ ರವಿ ಪೂಜಾರಿ ಅವರ ಬಳಿ ಕೆಲಸ ಮಾಡುವಾಗ ಹಲವು ಪ್ರಮುಖ ಶೂಟೌಟ್ಗಳಲ್ಲಿ ಭಾಗಿಯಾಗಿದ್ದ. ಈತನ ಮೂಲ ಉಡುಪಿ ಜಿಲ್ಲೆಯ ಮಲ್ಪೆಯಾಗಿದ್ದು, ಕರಾವಳಿಯನ್ನು ಬಾಲ್ಯದಲ್ಲೇ ತೊರೆದಿದ್ದ ಈತನ ವಿರುದ್ದ ಕರಾವಳಿಯಲ್ಲಿ ಅಪರಾಧ ಕೃತ್ಯ ಎಸಗಿರುವ ಮಾಹಿತಿ ಇಲ್ಲ.