ನವದೆಹಲಿ, ಡಿ 15 (DaijiworldNews/MS): ತುಳು ಭಾಷೆ ಸದ್ಯ ಸಂವಿಧಾನದ ಎಂಟನೇ ಪರಿಚ್ಛೇದದಡಿ ಸೇರ್ಪಡೆಗೊಳ್ಳುವ ತುಳು ಭಾಷಿಕರ ಕನಸು ಶೀಘ್ರ ನನಸಾಗುವಂತೆ ಕಾಣಿಸುತ್ತಿಲ್ಲ. ಮಂಗಳವಾರ ಲೋಕ ಸಭೆ ಯಲ್ಲಿ ಚುಕ್ಕಿರಹಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೃಹ ಖಾತೆಯ ಸಹಾಯಕ ಸಚಿವ ನಿತ್ಯಾನಂದ ರಾಯ್ ಸದ್ಯ ಇದಕ್ಕೆ ಅವಕಾಶ ಇಲ್ಲ ಎಂದು ಉತ್ತರಿಸಿದ್ದಾರೆ. ಹೀಗಾಗಿ ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಭಾಷೆಗೂ ಅಧಿಕೃತ ಸ್ಥಾನಮಾನ ದೊರೆಯುವ ಭಾಗ್ಯ ಶೀಘ್ರ ಒದಗುವಂತೆ ಕಾಣುತ್ತಿಲ್ಲ.
ಲೋಕಸಭೆಯ ಮಂಗಳವಾರದ ಕಲಾಪ ಸಂದರ್ಭ ಸಂಸದ ರಾಜಮೋಹನ್ ಉಣ್ಣಿತ್ತಾನ್ ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಯೋಜನೆ ಸರಕಾರಕ್ಕಿದೆಯೇ, ಇಲ್ಲವಾದರೆ ಕಾರಣ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ನಿತ್ಯಾನಂದ ರಾಯ್, ತುಳು ಭಾಷೆಗೂ ಅಧಿಕೃತ ಸ್ಥಾನಮಾನಕ್ಕಾಗಿ ಆಗ್ರಹವಿರುವುದು ಸರಕಾರದ ಗಮನದಲ್ಲಿದೆ. ಆದರೆ ಅಧಿಕೃತ ಭಾಷೆಗಳ ಸಂಖ್ಯೆಯನ್ನು ಪ್ರಸ್ತುತ ಹೆಚ್ಚಿಸುವುದು ಆಡಳಿತಾತ್ಮಕ ವಾಗಿ ಕಾರ್ಯಸಾಧ್ಯವಲ್ಲ ಎಂದಿದ್ದಾರೆ.
ಭಾಷೆಗಳು ಮತ್ತು ಉಪಭಾಷೆಗಳ ವಿಕಾಸ ಒಂದು ಸತತ ಪ್ರಕ್ರಿಯೆಯಾಗಿದ್ದು, ಸಾಮಾಜಿಕ-ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆಗಳಿಂದ ಪ್ರಭಾವಿತವಾಗುತ್ತದೆ. ಆದ್ದರಿಂದ ಭಾಷೆಗಳನ್ನು ಉಪಭಾಷೆಗಳಿಂದ ಪ್ರತ್ಯೇಕವಾಗಿ ಗುರುತಿಸಲು, ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಗೊಳಿಸಲು ಮಾನದಂಡಗಳನ್ನು ನಿರ್ದಿಷ್ಟವಾಗಿ ರೂಪಿಸುವುದು ಕಷ್ಟ ಎಂದಿದ್ದಾರೆ. ಸಂಬಂಧ ಮಾನದಂಡಗಳನ್ನು ರೂಪಿಸುವ ಪಹ್ವಾ (1996) ಮತ್ತು ಸೀತಾಕಾಂತ್ ಮೊಹಾಪಾತ್ರ (2003) ಸಮಿತಿಗಳ ಪ್ರಯತ್ನಗಳು ಸಂಪೂರ್ಣ ಯಶಸ್ವಿಯಾಗಿಲ್ಲ. ಹೀಗಾಗಿ ಸದ್ಯ ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಪ್ರಸ್ತಾವ ಸರಕಾರದ ಮುಂದಿಲ್ಲ. ಡಾ| ಸೀತಾಕಾಂತ ಮೊಹಾಪಾತ್ರ ಸಮಿತಿಯು ಎಂಟನೇ ಪರಿಚ್ಛೇದದಲ್ಲಿರುವ ಅಧಿಕೃತ ಭಾಷೆಗಳ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಶಿಫಾರಸು ಮಾಡಿದೆ ಎಂದು ಹೇಳಿದ್ದಾರೆ.