ಶ್ರೀನಗರ, ಡಿ. 14 (DaijiworldNews/HR): ಶ್ರೀನಗರದಲ್ಲಿ ಪೊಲೀಸ್ ಸಿಬ್ಬಂದಿಗಳು ತೆರಳುತ್ತಿದ್ದ ಬಸ್ ಮೇಲೆ ಉಗ್ರರು ನಡೆಸಿರುವ ದಾಳಿಯು ಪೂರ್ವಯೋಜಿತವಾಗಿತ್ತು ಎಂದು ಐಜಿಪಿ (ಕಾಶ್ಮೀರ) ವಿಜಯ್ ಕುಮಾರ್ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸೋಮವಾರವಾದಂದು ಶ್ರೀನಗರ ಹೊರವಲಯ ಜೆವಾನ್ ಪೊಲೀಸ್ ಕ್ಯಾಂಪ್ ಹತ್ತಿರ ಪೊಲೀಸ್ ವಾಹನದ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ಮೃತಪಟ್ಟು, ಅನೇಕ ಮಂದಿ ಗಾಯಗೊಂಡಿದ್ದರು.
ಇನ್ನು ಇಂದು ಮತ್ತೊಬ್ಬ ಜಮ್ಮು-ಕಾಶ್ಮೀರದ ಸಶಸ್ತ್ರ ಪೊಲೀಸ್ ಪಡೆಯ 9ನೇ ಬೆಟಾಲಿಯನ್ ನ ಕಾನ್ಸ್ ಟೇಬಲ್ ರಮೀಜ್ ಅಹ್ಮದ್ ಮೃತಪಟ್ಟಿದ್ದು, ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿತ್ತು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಐಜಿಪಿ ವಿಜಯ್ ಕುಮಾರ್, "25 ಪೊಲೀಸರನ್ನು ಹೊತ್ತಿದ್ದ ಬಸ್ ಶಿಬಿರಕ್ಕೆ ವಾಪಸಾಗುತ್ತಿದ್ದಾಗ ಜೈಷೆ ಮುಹಮ್ಮದ್ ನ ಮೂವರು ಭಯೋತ್ಪಾದಕರು ಅದರ ಮೇಲೆ ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಇದು ಪೂರ್ವಯೋಜಿತ ದಾಳಿಯಾಗಿದೆ. ಪೊಲೀಸರು ತಮ್ಮ ಕರ್ತವ್ಯಗಳನ್ನು ಪೂರೈಸಿದ ಬಳಿಕ ಬಸ್ ನಲ್ಲಿ ಅದೇ ದಾರಿಯಾಗಿ ಮರಳುತ್ತಿದ್ದನ್ನು ಅವರು ಖಂಡಿತವಾಗಿಯೂ ಗಮನಿಸಿದ್ದರು" ಎಂದರು.
ಇನ್ನು ಈ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, ಇತರ 11 ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.