ಬೆಂಗಳೂರು, ಡಿ.14 (DaijiworldNews/PY): "ಸೂರು ಕಳೆದುಕೊಂಡ ಬಡ ಜನ ದಿಕ್ಕು ತೋಚದೆ ಕೂತಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ ಯಾವುದೂ ಇಲ್ಲ" ಎಂದು ವಿಪಕ್ಷ ನಾಯಕ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "2019 ರಲ್ಲಿ ಬಂದ ಭಾರಿ ಪ್ರವಾಹದಿಂದಾಗಿ ಬಿದ್ದ ಮನೆಗಳು 2.47 ಲಕ್ಷ . ಅದರಲ್ಲಿ 1 ಲಕ್ಷದ 14 ಸಾವಿರ ಮನೆಗಳಿಗೆ ಇನ್ನೂ ಪರಿಹಾರ ನೀಡಿಲ್ಲ. ಸೂರು ಕಳೆದುಕೊಂಡ ಬಡ ಜನ ದಿಕ್ಕು ತೋಚದೆ ಕೂತಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ ಯಾವುದೂ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮಗಳೇ ರೈತ ವಿರೋಧಿಯಾಗಿದೆ. 33% ಗಿಂತ ಕಡಿಮೆ ಬೆಳೆ ಹಾನಿಗೆ ಪರಿಹಾರ ನೀಡಲ್ಲ. ಬೆಳೆದು ನಿಂತ ಬೆಳೆಗಳು ಹಾನಿಯಾದಾಗ ಮಾತ್ರ ಪರಿಹಾರ ನೀಡಲಾಗುತ್ತೆ. ಕಟಾವು ಆಗಿರುವ ಬೆಳೆ ಮಳೆಯಿಂದ ಹಾನಿಯಾದರೆ ಅದಕ್ಕೆ ಪರಿಹಾರ ಸಿಗಲ್ಲ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮಗಳು ಕೊನೆಯ ಬಾರಿ ಪರಿಷ್ಕರಣೆಗೊಂಡಿದ್ದು 2015ರಲ್ಲಿ. ಹಳೆಯ ನಿಯಮಗಳಿಗೆ ಬದಲಾವಣೆ ತಂದು ನಷ್ಟದಲ್ಲಿರುವ ಎಲ್ಲ ರೈತರಿಗೆ ಪರಿಹಾರ ನೀಡುವಂತೆ ಪರಿಷ್ಕರಿಸಬೇಕು" ಎಂದು ಒತ್ತಾಯಿಸಿದ್ದಾರೆ.
"ಕೊಬ್ಬರಿಯ ಪ್ರೋತ್ಸಾಹ ಧನವನ್ನು ರೂ. 700 ರಿಂದ ರೂ. 1000 ಕ್ಕೆ ಹೆಚ್ಚು ಮಾಡಿದ್ದು ನಮ್ಮ ಸರ್ಕಾರ. ನಾವು 2017-18 ರಲ್ಲಿ 2 ಲಕ್ಷದ 96 ಸಾವಿರ ಕ್ವಿಂಟಾಲ್ ಕೊಬ್ಬರಿ ಖರೀದಿ ಮಾಡಿದ್ದೆವು. ಬಿಜೆಪಿ ಸರ್ಕಾರ ಖರೀದಿ ಮಾಡಿದ್ದು 50,400 ಕ್ವಿಂಟಾಲ್ ಮಾತ್ರ. ನಮ್ಮ ಸರ್ಕಾರ ತೊಗರಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಮೇಲೆ ಮೊದಲು ರೂ. 450, ನಂತರ ರೂ. 550 ಅನ್ನು ಹೆಚ್ಚುವರಿಯಾಗಿ ನೀಡಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದನ್ನು ರೂ. 300 ಕ್ಕೆ ಇಳಿಸಿದೆ. ಇದೇನಾ ತಮ್ಮದು ರೈತ ಪರ ಸರ್ಕಾರ ಎಂದು ಕರೆದುಕೊಳ್ಳುವವರ ಧೋರಣೆ?" ಎಂದು ಪ್ರಶ್ನಿಸಿದ್ದಾರೆ.
"ಎನ್.ಡಿ.ಆರ್.ಎಫ್ ನಿಯಮದ ಪ್ರಕಾರ ಕುಷ್ಕಿ ಜಮೀನಿಗೆ ರೂ. 6,800 ಮತ್ತು ತರಿ ಜಮೀಮಿಗೆ ರೂ. 13,500 ಮತ್ತು ತೋಟಗಾರಿಕಾ ಬೆಳೆಗಳಿಗೆ ರೂ. 18,000 ಪರಿಹಾರ ನೀಡಬೇಕು ಮತ್ತು ಗರಿಷ್ಠ ಎರಡು ಹೆಕ್ಟೇರ್ ಬೆಳೆಹಾನಿಗೆ ಮಾತ್ರ ಪರಿಹಾರ ನೀಡಬೇಕೆಂದಿದೆ. ಎನ್.ಡಿ.ಆರ್.ಎಫ್ ನಿಯಮಗಳಡಿ ಈಗ ನೀಡುತ್ತಿರುವ ಪರಿಹಾರದ ಹಣ ರೈತರು ಬಿತ್ತನೆ ಬೀಜ ಖರೀದಿ ಮಾಡಲು ವೆಚ್ಚ ಮಾಡುವ ಹಣಕ್ಕಿಂತ ಕಡಿಮೆಯಿದ್ದು, ಇದನ್ನು ಕನಿಷ್ಠ ಮೂರು ಪಟ್ಟು ಹೆಚ್ಚಿಸಬೇಕು ಎಂದು ಬಿಜೆಪಿ ಹಾಗೂ ಬಿಜೆಪಿ ಸರ್ಕಾರಗಳನ್ನು ಒತ್ತಾಯಿಸುತ್ತೇನೆ" ಎಂದಿದ್ದಾರೆ.
"ಪ್ರಸಕ್ತ ವರ್ಷ 39,000 ಮನೆಗಳು ಮಳೆಯಿಂದಾಗಿ ಹಾನಿಗೀಡಾಗಿದೆ. ಈ ವರೆಗೆ ಒಂದೇ ಒಂದು ಮನೆಗೆ ಪರಿಹಾರದ ಹಣ ನೀಡಿಲ್ಲ. 12 ಲಕ್ಷ ಎಕರೆ ಪ್ರದೇಶಕ್ಕೆ ರೂ. 782 ಕೋಟಿ ಬೆಳೆ ಪರಿಹಾರದ ಹಣ ಮಾತ್ರ ನೀಡಲಾಗಿದೆ. ಬೆಳೆ ನಷ್ಟ ನಮೂದು ಮಾಡುವುದನ್ನು ಈ ತಿಂಗಳ 8ನೇ ತಾರೀಖಿಗೆ ಕೊನೆಗೊಳಿಸಲಾಗಿದೆ. ಹಲವು ರೈತರ ಬೆಳೆನಷ್ಟದ ಮಾಹಿತಿ ಇನ್ನೂ ನಮೂದಾಗದೆ ಬಾಕಿ ಉಳಿದಿರುವುದರಿಂದ ಬೆಳೆ ನಷ್ಟ ನಮೂದು ಪ್ರಕ್ರಿಯೆಯನ್ನು ಬಿಜೆಪಿ ಸರ್ಕಾರ ಮುಂದುವರೆಸಬೇಕು" ಎಂದು ಹೇಳಿದ್ದಾರೆ.
"ಹಿಂದಿನ ಯು.ಪಿ.ಎ ಸರ್ಕಾರದ ಅವಧಿಯ ಬಜೆಟ್ ಗಾತ್ರ 16 ಲಕ್ಷದ 65 ಸಾವಿರ ಕೋಟಿ ಇತ್ತು, ಕೇಂದ್ರದ ಈಗಿನ ಬಜೆಟ್ ಗಾತ್ರ ರೂ. 34 ಲಕ್ಷದ 83 ಸಾವಿರ ಕೋಟಿ ಆಗಿದೆ. ಬಜೆಟ್ ಗಾತ್ರ ಹೆಚ್ಚಾದಂತೆ ಎನ್,ಡಿ,ಆರ್,ಎಫ್ ನ ಗಾತ್ರ, ರಾಜ್ಯಗಳಿಗೆ ನೀಡುವ ಪರಿಹಾರದ ಹಣ ಹೆಚ್ಚಾಗಬೇಕಲ್ಲವೇ?" ಎಂದು ಕೇಳಿದ್ದಾರೆ.
"ರಾಜ್ಯ ವಿಪತ್ತು ಪರಿಹಾರ ನಿಧಿ ನಿಯಮಗಳ ಅನ್ವಯ 2019 ರಲ್ಲಿ ರಾಜ್ಯ ಬಿಜೆಪಿ ಸರ್ಕಾರ ಪರಿಹಾರ ನೀಡಿದ್ದು ರೂ. 1,652 ಕೋಟಿ. ನೀಡಬೇಕಾದುದ್ದು ರೂ. 3,891 ಕೋಟಿ. 2020 ರಲ್ಲಿ ರೂ. 1,318 ಕೋಟಿ ಪರಿಹಾರ ನೀಡಲಾಗಿದೆ. ಕಳೆದ ಎರಡು ವರ್ಷದಲ್ಲಿ ಒಟ್ಟು ರೂ. 2,971 ಕೋಟಿ ಮಾತ್ರ ಪರಿಹಾರ ನೀಡಲಾಗಿದೆ" ಎಂದಿದ್ದಾರೆ.