ನವದೆಹಲಿ, ಡಿ 14 (DaijiworldNews/MS): 12ನೇ ತರಗತಿಯ ಸಿಬಿಎಸ್ಇ ಅಕೌಂಟೆನ್ಸಿ ಪ್ರಶ್ನೆಪತ್ರಿಕೆಯಲ್ಲಿ ದೋಷವಿದ್ದು, ವಿದ್ಯಾರ್ಥಿಗಳಿಗೆ ಆರು ಕೃಪಾಂಕಗಳನ್ನು ನೀಡಲಾಗುತ್ತದೆ ಎಂದು ಹರಿದಾಡುತ್ತಿರುವ ಆಡಿಯೋ ವರದಿ ನಕಲಿಯಾಗಿದ್ದು, ಅದನ್ನು ನಂಬಬೇಡಿ ಎಂದು ವಿದ್ಯಾರ್ಥಿಗಳಿಗೆ ಸಿಬಿಎಸ್ಇ ಎಚ್ಚರಿಕೆ ನೀಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮಂಡಳಿಯ ಪರೀಕ್ಷಾ ನಿಯಂತ್ರಕರ ಹೆಸರಿನಲ್ಲಿ ಹರಿದಾಡುತ್ತಿರುವ ವಿಡಿಯೊ ನಕಲಿ, ಆಧಾರ ರಹಿತವಾದುದು ಎಂದು ಸಿಬಿಎಸ್ಇ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
12ನೇ ತರಗತಿಯ ಸಿಬಿಎಸ್ಇ ಅಕೌಂಟೆನ್ಸಿ ಟರ್ಮ್-1 ಪ್ರಶ್ನೆ ಪತ್ರಿಕೆಯಲ್ಲಿ ಪ್ರಮಾದವಾಗಿದೆ, ಡಿಸೆಂಬರ್ 13ರಂದು ನಡೆದ ಈ ಪರೀಕ್ಷೆಯಲ್ಲಿ ಮಂಡಳಿಯು 6 ಕೃಪಾಂಕಗಳನ್ನು ನೀಡುವುದಾಗಿ ಪರೀಕ್ಷಾ ನಿಯಂತ್ರಕರ ಹೆಸರಿನಲ್ಲಿ ಒಂದು ಧ್ವನಿ ಸಂದೇಶ ಬಳಸಿ ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದು ಮಂಡಳಿಯ ಗಮನಕ್ಕೆ ಬಂದಿದ್ದು ಈ ಸುದ್ದಿಗಳು ಸಂಪೂರ್ಣ ಆಧಾರರಹಿತವಾಗಿದ್ದು ಸುಳ್ಳಾಗಿದೆ. ಯಾವುದೇ ವರದಿಗಾರರು ಪರೀಕ್ಷಾ ನಿಯಂತ್ರಕರೊಂದಿಗೆ ಈ ಕುರಿತು ಮಾತನಾಡಿಲ್ಲ ಮತ್ತು ಈ ನಿಟ್ಟಿನಲ್ಲಿ ಸಿಬಿಎಸ್ಇ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದ್ದರಿಂದ ಸಾರ್ವಜನಿಕರು ತಮ್ಮ ಸ್ವಂತ ಹಿತಾಸಕ್ತಿಯಿಂದ ಇಂಥ ಅಪರಿಶೀಲಿತ ವರದಿಗಳನ್ನು ನಂಬಬಾರದು ಎಂದು ಸಿಬಿಎಸ್ಇ ಎಚ್ಚರಿಸಿದೆ.