ಸುವರ್ಣಸೌಧ, ಡಿ. 14 (DaijiworldNews/HR): ವಿಧಾನ ಪರಿಷತ್ ಚುನಾವಣೆಯಲ್ಲಿ 12 ಗೆಲ್ಲಬಹುದು ಎಂದು ನಮ್ಮ ನಿರೀಕ್ಷೆಯಿತ್ತು. ಆದರೆ 11 ಸ್ಥಾನಗಳನ್ನು ಗೆದ್ದಿದ್ದೇವೆ. ಇದು ಜನರ ತೀರ್ಪಲ್ಲ. ಸ್ಥಳೀಯ ನಾಯಕರ ಅಭಿಪ್ರಾಯ. ಆದರೂ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಪರಿಷತ್ ಫಲಿತಾಂಶದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರಲ್ಲಿ ಗಾಯತ್ರಿ ಅವರು ನಾಲ್ಕು ಮತಗಳ ಅಂತರದಿಂದ ಸೋಲಾಗಿದೆ. ಅದೊಂದು ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ನಾನು ಗಾಯತ್ರಿ ಅವರಿಗೆ ಕರೆ ಮಾತನಾಡಿದ್ದೇನೆ. ವಕೀಲರನ್ನು ಸಂಪರ್ಕ ಮಾಡಿ ಎಂದು ಹೇಳಿದ್ದೇವೆ. ನಾಮ ನಿರ್ದೇಶನ ಅಭ್ಯರ್ಥಿಗಳ ಮತದಾನ ಮಾಡುವ ವಿಚಾರಕ್ಕಾಗಿ ಅವರ ಜೊತೆ ಮಾತುಕತೆ ನಡೆಸಿದ್ದೇನೆ ಎಂದರು.
ಇನ್ನು ಬೆಳಗಾವಿಯಲ್ಲಿ ಬಿಜೆಪಿ ಸೋಲು ಕಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ಬಿಜೆಪಿಗೆ ಧಮ್ ಇಲ್ಲ. ಪಕ್ಷೇತರರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಅವಕಾಶ ಮಾಡಿಕೊಟ್ಟಿದ್ದರು. ನಮ್ಮ ಅಭ್ಯರ್ಥಿ ಮೊದಲ ಪ್ರಾಶಸ್ತ್ಯದಲ್ಲಿ ಜಯಗಳಿಸಿದ್ದಾರೆ" ಎಂದು ಹೇಳಿದ್ದಾರೆ.