ಮಥುರಾ, ಡಿ.14 (DaijiworldNews/PY): "ಪ್ರಧಾನಮಂತ್ರಿ ಹಾಗೂ ವಿತ್ತ ಸಚಿವರಿಗೆ ಅರ್ಥಶಾಸ್ತ್ರ ಗೊತ್ತಿಲ್ಲ" ಎನ್ನುವ ಮೂಲಕ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ತಮ್ಮದೇ ಪಕ್ಷದ ಸರ್ಕಾರವನ್ನು ಟೀಕಿಸಿದ್ದಾರೆ.
"ದೇಶದಲ್ಲಿನ ಬೆಲೆ ಏರಿಕೆಗೆ ಕೇಂದ್ರ ಹಣಕಾಸು ಸಚಿವರೇ ಹೊಣೆ. ಯಾರನ್ನೂ ಸಹ ಅವರು ಸಂಪರ್ಕಿಸುವುದಿಲ್ಲ" ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸರ್ಕಾರಕ್ಕೆ ಅರ್ಥಶಾಸ್ತ್ರ ಅರ್ಥವಾಗುತ್ತಿಲ್ಲ, ಈ ಕುರಿತು ಪ್ರಧಾನಿ ಅಥವಾ ಹಣಕಾಸು ಸಚಿವರಿಗೆ ತಿಳಿದಿಲ್ಲ. ಬೆಳವಣಿಗೆ ದರ ಕುಸಿದಿದ್ದರೂ ಏನು ಮಾಡಬೇಕೆಂದು ಅವರಿಗೆ ಗೊತ್ತಿಲ್ಲ" ಎಂದು ಹೇಳಿದ್ದಾರೆ.
"ಕೆಲವು ಹಿಂದೂ ಸಂಘಟನೆಗಳ ಪ್ರಕಾರ, ಈಗ ಮಸೀದಿಗಳು ಇರುವ ಸ್ಥಳಗಳಲ್ಲಿ ಹಿಂದೂ ದೇವಾಲಯಗಳು ಇದ್ದವು. ಪ್ರಾರ್ಥನಾ ಸ್ಥಳಗಳ ಕಾಯ್ದೆ,1991 ಅನ್ನು ರದ್ದು ಮಾಡುವಂತೆ ಕೋರಿ ಸಲ್ಲಿಸಿರುವ ಮೊಕದ್ದಮೆಗೆ ಕೇಂದ್ರವು ಇನ್ನೂ ಪ್ರತಿಕ್ರಿಯಿಸಿಲ್ಲ" ಎಂದು ತಿಳಿಸಿದ್ದಾರೆ.
"ಗಡಿ ವಿಚಾರದಲ್ಲಿ ಚೀನಾದೊಂದಿಗೆ ಸರ್ಕಾರ ವ್ಯವಹರಿಸಿದ ರೀತಿ ತನಗೆ ತೃಪ್ತಿ ತಂದಿಲ್ಲ" ಎಂದು ಹೇಳಿದ್ದಾರೆ.