ಬೆಂಗಳೂರು, ಡಿ 14 (DaijiworldNews/MS): ರಾಷ್ಟ್ರಕವಿ ಕುವೆಂಪು ಅವರ ಸೊಸೆ, ಕವಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ (84 ವ) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ 6.20ಕ್ಕೆ ನಿಧನರಾದರು.
ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್ವರಿ ತೇಜಸ್ವಿ ಅವರು ಕಳೆದ ಮೂರ್ನಾಲ್ಕು ದಿನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.
ರಾಜೇಶ್ವರಿ ಅವರು ಪತಿ ಪೂರ್ಣಚಂದ್ರ ತೇಜಸ್ವಿ ನಿಧನ ಬಳಿಕ ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ತೋಟದಲ್ಲಿ ಒಬ್ಬರೇ ವಾಸವಾಗಿದ್ದರು. ಕಳೆದ ಕೆಲ ದಿನದ ಹಿಂದೆ ಬೆಂಗಳೂರಿನ ಮಗಳ ಮನೆಗೆ ಹೋಗಿದ್ದರು.
1937ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯಂ ಹೊಸ ಬಡಾವಣೆಯಲ್ಲಿ ತೀರಾ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ರಾಜೇಶ್ವರಿ ಅವರು , ಹೆಣ್ಣುಮಕ್ಕಳಿಗೂ ತಮ್ಮ ಕಾಲ ಮೇಲೆ ನಿಂತುಕೊಳ್ಳುವ ವಿದ್ಯಾಭ್ಯಾಸ ಕೊಡಬೇಕೆನ್ನುವ ತಮ್ಮ ತಂದೆಯ ಉದಾತ್ತ ಧ್ಯೇಯದಿಂದಾಗಿ ತತ್ವಶಾಸ್ತ್ರದಲ್ಲಿ ಆನರ್ಸ್ ಮತ್ತು ಎಂ.ಎ ಮಾಡಲು ಮಾನಸ ಗಂಗೋತ್ರಿ ಮೈಸೂರಿಗೆ ಬಂದರು. ಅಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಪರಿಚಯವಾಗಿ ಪ್ರೀತಿಸಿದರು. ಆನಂತರ ಇವರ ಬದುಕಿನ ದಿಕ್ಕೇ ಬದಲಾಯಿಸಿತು. 1966ರಲ್ಲಿ ವಿವಾಹವಾದರು. ‘ನನ್ನ ತೇಜಸ್ವಿ’ ರಾಜೇಶ್ವರಿ ಅವರ ಮೊಟ್ಟ ಮೊದಲ ಪುಸ್ತಕ. ಆ ಬಳಿಕ "ನಮ್ಮ ಮನೆಗೂ ಬಂದರು ಗಾಂಧೀಜಿ" ಪುಸ್ತಕಗಳನ್ನು ಬರೆದಿದ್ದಾರೆ.
ತೇಜಸ್ವಿ - ರಾಜೇಶ್ವರಿ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಇಬ್ಬರೂ ಸಾಫ್ಟ್ ವೇರ್ ಇಂಜಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.