ಬೆಳಗಾವಿ, ಡಿ.14 (DaijiworldNews/PY): "ಸಿಡಿಎಸ್ ಜನರಲ್ ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತದ ಕುರಿತು ತನಿಖೆ ಆಗಬೇಕು" ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಿರ್ಣಯಕ್ಕೆ ಬೆಂಬಲಿಸಿ ಮಾತನಾಡಿದ ಅವರು, "ಅಪಘಾತದ ಕುರಿತು ತನಿಖೆ ಆಗದಿದ್ದಲ್ಲಿ ಅಸಮಾಧಾನ ಹಾಗೆಯೇ ಉಳಿಯುತ್ತದೆ. ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಕುರಿತು ಕೆಲವರು ವಿಕೃತ ಹೇಳಿಕೆ ಟ್ವೀಟ್ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದನ್ನು ಖಂಡಿಸಿದ್ದಾರೆ" ಎಂದಿದ್ದಾರೆ.
ಬಳಿಕ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, "ಅಡ್ವಾನ್ಸ್ ಇಂಜಿನ್ ಹೆಲಿಕಾಪ್ಟರ್ ಅಪಘಾತದಿಂದ ಸಾವನ್ನಪ್ಪಿದ್ದಾರೆ ಎನ್ನುವುದೇ ಆಶ್ಚರ್ಯ. ಯಾರದೋ ಕೈವಾಡ ಇದೆ ಎಂದು ನಾನು ಶಂಕೆ ಪಡುತ್ತಿಲ್ಲ. ಆದರೆ, ಅವರು ಹೇಗೆ ಸತ್ತರು, ಅಪಘಾತ ಹೇಗಾಯಿತು ಎನ್ನುವುದೇ ನಿಗೂಢವಾಗಿದೆ. ಜನರಿಗೆ ಈ ಕುರಿತು ತಿಳಿಯಬೇಕು" ಎಂದು ಒತ್ತಾಯಿಸಿದ್ದಾರೆ.
"ಈ ಬಗ್ಗೆ ತನಿಖೆಯಾಗಬೇಕು. ಈ ಕುರಿತು ಸಂಶಯ ಇದೆ. ಅಪಘಾತಕ್ಕೆ ಏನು ಕಾರಣ ಎನ್ನುವುದು ತಿಳಿಯಬೇಕು" ಎಂದಿದ್ದಾರೆ.