ಕೊಚ್ಚಿ, ಡಿ. 13 (DaijiworldNews/HR): ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಫೋಟೋ ಹಾಕಿರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿಯನ್ನು ಪ್ರಶ್ನಿಸಿರುವ ಕೇರಳ ಹೈಕೋರ್ಟ್, ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಹಾಕಿರುವುದರಿಂದ ನಿಮಗೆ ಏನು ತೊಂದರೆ? ಪ್ರಧಾನಿ ಬಗ್ಗೆ ನೀವು ಏಕೆ ನಾಚಿಕೆಪಡುತ್ತೀರಿ? ಎಂದು ಕೇಳಿದೆ.
ಕೊಟ್ಟಾಯಂನ ಪೀಟರ್ ಮಾಯಲಿಪರಂಬಿಲ್ ಎಂಬವರು ಲಸಿಕೆ ಪ್ರಮಾಣ ಪತ್ರದಲ್ಲಿ ನರೇಂದ್ರ ಮೋದಿ ಫೋಟೋಗೆ ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್, "ನರೇಂದ್ರ ಮೋದಿಯವರು ಭಾರತ ಪ್ರಧಾನಿಯೇ ಹೊರತು ಅಮೇರಿಕಾದ ಪ್ರಧಾನಿಯಲ್ಲ. ಮೋದಿಯವರು ಅಧಿಕಾರಕ್ಕೆ ಬಂದದ್ದು ಜನಾದೇಶದಿಂದ. ನೀವು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಹೆಸರಿನ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದೀರಿ, ಆ ಸಂಸ್ಥೆಯಿಂದ ನೆಹರು ಹೆಸರನ್ನು ತೆಗೆದುಹಾಕುವ ನಿಲುವನ್ನು ನೀವು ಏಕೆ ತೆಗೆದುಕೊಳ್ಳುತ್ತಿಲ್ಲ?" ಎಂದು ಪ್ರಶ್ನಿಸಿದ್ದಾರೆ.
ಇನ್ನು ಮೋದಿ ನಮ್ಮ ಪ್ರಧಾನಿ, ನಿಮಗೆ ರಾಜಕೀಯ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಸರ್ಟಿಫಿಕೇಟ್ನಲ್ಲಿ ಪ್ರಧಾನಿಯವರ ಫೋಟೋದಿಂದ ನಿಮೆಗ ಏನು ಸಮಸ್ಯೆ ಅಂತ ನನಗೆ ಅರ್ಥವಾಗುತ್ತಿಲ್ಲ ಎಂದು ಕೋರ್ಟ್ ಹೇಳಿದೆ.