ನವದೆಹಲಿ, ಡಿ.13 (DaijiworldNews/PY): ಮಹಾತ್ಮ ಗಾಂಧಿ ಹಿಂದೂ, ಗೋಡ್ಸೆ ಹಿಂದುತ್ವವಾದಿ. ಭಾರತ ಹಿಂದುಗಳ ದೇಶ, ಹಿಂದುತ್ವವಾದಿಗಳದ್ದಲ್ಲ ಎಂದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯೆ ನೀಡಿದ್ದು, "ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಹಿಂದುತ್ವದ ನೆಲಕ್ಕೆ ಗೊಬ್ಬರ ಹಾಕಿದರು. ಅವರು ಈಗ ಬಹುಮತವನ್ನು ಕೊಯ್ಲು ಮಾಡಲು ಯತ್ನಿಸುತ್ತಿದ್ದಾರೆ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಓವೈಸಿ, "2021ರಲ್ಲಿ ಹಿಂದೂಗಳನ್ನು ಅಧಿಕಾರಕ್ಕೆ ತರುವುದೇ ಜಾತ್ಯಾತೀತ ಅಜೆಂಡಾ. ಎಲ್ಲಾ ಭಾರತೀಯರಿಗೆ ಭಾರತವು ಸೇರಿದೆ. ಹಿಂದೂಗಳಿಗೆ ಮಾತ್ರವಲ್ಲ" ಎಂದು ತಿಳಿಸಿದ್ಧಾರೆ.
"ಯಾವುದೇ ಗ್ರಂಥವನ್ನು ಓದಿ, ಗೀತೆ, ರಾಮಾಯಣ ಮಹಾಭಾರತಗಳಲ್ಲಿ ಇರಲಿ. ಬಡವರು ಹಾಗೂ ದುರ್ಬಲರು ತುಳಿತಕ್ಕೊಳಗಾಗಬೇಕು ಎಂದು ಎಲ್ಲಿ ಬರೆಯಲಾಗಿದೆ?" ಎಂದು ಕೇಳಿದ್ದಾರೆ.
ರಾಹುಲ್ ಹೇಳಿಕೆಗೆ ಸ್ಪಷ್ಟನೆ ನೀಡಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, "ಸತ್ಯ, ಅಹಿಂಸೆ, ಪ್ರೀತಿ, ಸಹೋದರತೆ ಮತ್ತು ಸಹಿಷ್ಣುತೆಯನ್ನು ನಂಬುವ ವ್ಯಕ್ತಿ ಹಿಂದೂ. ಹಿಂದೂಗಳು ಯಾರನ್ನೂ ದ್ವೇಷಿಸುವುದಿಲ್ಲ ಮತ್ತು ಎಲ್ಲಾ ಧರ್ಮಗಳನ್ನು ಗೌರವಿಸುತ್ತಾರೆ. ಹಿಂದೂ ಮತ್ತು ಹಿಂದುತ್ವವಾದಿಗಳ ನಡುವಿನ ವ್ಯತ್ಯಾಸವು ಗಾಂಧಿ ಮತ್ತು ಗೋಡ್ಸೆ ನಡುವಿನ ವ್ಯತ್ಯಾಸವಾಗಿದೆ ಎಂದು ಹೇಳಿದ್ದಾರೆ.
"ದೇಶದಲ್ಲಿ ಎರಡು ಪದಗಳ ನಡುವೆ ಘರ್ಷಣೆ ನಡೆಯುತ್ತಿದೆ. ಒಂದು ಪದ ಹಿಂದೂ ಮತ್ತು ಇನ್ನೊಂದು ಹಿಂದುತ್ವ. ಹಿಂದು ಹಾಗೂ ಹಿಂದುತ್ವವಾದದ ಮಧ್ಯೆ ವ್ಯತ್ಯಾಸಗಳಿವೆ. ನಾನು ಹಿಂದು. ಆದರೆ, ಹಿಂದುತ್ವವಾದಿಯಲ್ಲ" ಎಂದು ರಾಹುಲ್ ಗಾಂಧಿ ಹೇಳಿದ್ದರು.
"ದೇಶದ ಮುಂದೆ ಏನಿದು ಹೋರಾಟ? ಯಾರ ನಡುವೆ? ಯಾವ ಸಿದ್ದಾಂತಗಳ ನಡುವೆ ಹೋರಾಟ?" ಎಂದು ಪ್ರಶ್ನಿಸಿದ್ದರು.
"ಎರಡು ಆತ್ಮಗಳು ಒಂದೇ ಆತ್ಮವನ್ನು ಹೊಂದಲು ಆಗುವುದಿಲ್ಲ. ಹಾಗೇ, ಎರಡು ಪದಗಳು ಒಂದೇ ಅರ್ಥವನ್ನು ಹೊಂದಲು ಸಾಧ್ಯವಿಲ್ಲ. ಪ್ರತಿಯೊಂದು ಪದಕ್ಕೂ ವಿಭಿನ್ನವಾದ ಅರ್ಥವಿದೆ. ಇಂದು ದೇಶದ ರಾಜಕೀಯದಲ್ಲಿ ಎರಡು ಪದಗಳ ಘರ್ಷಣೆ ನಡೆಯುತ್ತಿದೆ" ಎಂದು ಹೇಳಿದ್ದರು.
"ಅಧಿಕಾರ ಪಡೆಯುವುದಕ್ಕಾಗಿ ಹಿಂದುತ್ವವಾದಿಗಳು ತಮ್ಮ ಇಡೀ ಜೀವನವನ್ನು ಸವೆಸುತ್ತಾರೆ. ಅಧಿಕಾರವಷ್ಟೇ ಅವರಿಗೆ ಮುಖ್ಯ. ಅಧಿಕಾರಕ್ಕಾಗಿ ಅವರು ಏನು ಬೇಕಾದರೂ ಮಾಡುತ್ತಾರೆ" ಎಂದಿದ್ದರು.
ಹಿಂದೂಗಳ ಕುರಿತಾದ ರಾಹುಲ್ ಹೇಳಿಕೆಗೆ ಅಸಾದುದ್ದೀನ್ ಓವೈಸಿ ವಾಗ್ದಾಳಿ