ಮುಂಬಯಿ, ಡಿ. 13 (DaijiworldNews/HR): ಡ್ಯಾನ್ಸ್ ಬಾರ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ 17 ಯುವತಿಯರನ್ನು ರಕ್ಷಿಸಿರುರುವ ಘಟನೆ ಮುಂಬಯಿಯ ಅಂಧೇರಿಯಲ್ಲಿ ನಡೆದಿದೆ.
ಬಾರ್ ಮೇಲೆ ದಾಳಿ ನಡೆಯಲಿದೆ ಎಂಬ ಸುಳಿವು ಸಿಕ್ಕ ಡ್ಯಾನ್ಸ್ ಬಾರ್ ನ ಮಾಲೀಕರು ಯುವತಿಯರನ್ನು ರಹಸ್ಯ ನೆಲಮಾಳಿಗೆಯಲ್ಲಿ ಅಡಗಿಸಿ ಇಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಮಹಿಳೆಯೊಬ್ಬಳು ನೀಡಿರುವ ಮಾಹಿತಿಯ ಆಧಾರದ ಮೇಲೆ ಪೊಲೀಸರು ಅಂಧೇರಿಯಲ್ಲಿರುವ ದೀಪಾ ಬಾರ್ ಮೇಲೆ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಪೊಲೀಸರು ಸ್ಟೋರ್ ರೂಂ, ಕಿಚನ್ ರೂಂ ಹಾಗೂ ಬಾತ್ ರೂಂನಲ್ಲೆಲ್ಲಾ ಶೋಧ ಕಾರ್ಯ ನಡೆಸಿದ್ದರು, ಆದರೆ ಯಾವ ಯುವತಿಯೂ ಪತ್ತೆಯಾಗಿರಲಿಲ್ಲ. ಈ ಸಂದರ್ಭದಲ್ಲಿ ಪೊಲೀಸರು ಬಾರ್ ಮ್ಯಾನೇಜರ್, ಕ್ಯಾಶಿಯರ್ ನನ್ನು ಪ್ರಶ್ನಿಸಿದಾಗ ಯುವತಿಯರು ಇಲ್ಲ ಎಂದು ತಿಳಿಸಿದ್ದರು. ಈ ವೇಳೆ ಮೇಕಪ್ ರೂಂನಲ್ಲಿದ್ದ ದೊಡ್ಡ ಗಾತ್ರದ ಕನ್ನಡಿಯೊಂದು ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಗಾಜನ್ನು ಸರಿಸಲು ಪ್ರಯತ್ನಿಸಿದರೂ ಕೂಡಾ ಸಾಧ್ಯವಾಗಿರಲಿಲ್ಲ. ನಂತರ ಸುತ್ತಿಗೆಯಿಂದ ಕನ್ನಡಿಯನ್ನು ಒಡೆದಾಗ, ರಹಸ್ಯ ನೆಲಮಾಳಿಗೆ ಪತ್ತೆಯಾಗಿತ್ತು. ಅಲ್ಲಿ ಸುಮಾರು 17 ಯುವತಿಯರನ್ನು ಅಡಗಿಸಿ ಇಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾರ್ ಮ್ಯಾನೇಜರ್, ಕ್ಯಾಶಿಯರ್ ಹಾಗೂ ಸಿಬಂದಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.