ಬೆಂಗಳೂರು, ಡಿ 13 (DaijiworldNews/MS): ವಿಧಾನ ಪರಿಷತ್ ಪ್ರತಿಪಕ್ಷ ಸ್ಥಾನದ ನಾಯಕ ಸ್ಥಾನಕ್ಕಾಗಿ ಕಾಂಗ್ರೆಸ್ ನಾಯಕರ ಪೈಪೋಟಿ ವಿಚಾರವಾಗಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿಯೂ , ವಲಸೆ ನಾಯಕರು ಅಧಿಕಾರ ಅನುಭವಿಸುತ್ತಿದ್ದಾರೆ, ಹಿರಿಯ ನಾಯಕರು ಟಿಕೆಟ್ ವಂಚಿತರಾಗುತ್ತಿದ್ದಾರೆ ಎಂದು ಕುಹಕವಾಡಿದೆ.
ಕಾಂಗ್ರೆಸ್ ಪರಿಸ್ಥಿತಿ ಈಗ ಹೇಗಾಗಿದೆ ಎಂದರೆ ಸಿದ್ದರಾಮಯ್ಯ ಅಜೆಂಡಾ ಸೆಟ್ ಮಾಡುತ್ತಾರೆ. ಉಳಿದ ನಾಯಕರು ಮೌನಕ್ಕೆ ಶರಣಾಗುತ್ತಾರೆ.ಕೆಪಿಸಿಸಿಯ ವಿಫಲಾಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಅನಿವಾರ್ಯವಾಗಿ ಹಿಂಬಾಲಿಸುತ್ತಾರೆ.ವಲಸೆ ನಾಯಕರು ಅಧಿಕಾರ ಅನುಭವಿಸುತ್ತಿದ್ದಾರೆ, ಹಿರಿಯ ನಾಯಕರು ಟಿಕೆಟ್ ವಂಚಿತರಾಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.
ವಿಧಾನ ಪರಿಷತ್ ಪ್ರತಿಪಕ್ಷ ಸ್ಥಾನಕ್ಕಾಗಿಯೂ ಕಾಂಗ್ರೆಸ್ ಪಕ್ಷದಲ್ಲಿ ಈಗ "ಮೂಲ- ವಲಸಿಗ" ಕಾದಾಟ ಆರಂಭವಾಗಿದೆ. ಪಕ್ಷದ ಆಂತರಿಕ ವಲಯದಲ್ಲಿ ಸಿದ್ದರಾಮಯ್ಯ ಅವರನ್ನು ಬಲವಾಗಿ ವಿರೋಧಿಸುವ ಬಿ.ಕೆ.ಹರಿಪ್ರಸಾದ್ ಅವರನ್ನು ಮೂಲೆಗುಂಪು ಮಾಡುವುದಕ್ಕಾಗಿ ಸಿ.ಎಂ.ಇಬ್ರಾಹಿಂ ಅವರನ್ನು ಖುದ್ದು ಸಿದ್ದರಾಮಯ್ಯ ಛೂ ಬಿಟ್ಟಿರಬಹುದೇ? ಎಂದು ಅನುಮಾನ ವ್ಯಕ್ತಪಡಿಸಿದೆ.
ವಿಧಾನ ಪರಿಷತ್ ವಿಪಕ್ಷ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ಈಗಾಗಲೇ ದಾಳ ಉರುಳಿಸಿರುವುದು ಕಾಂಗ್ರೆಸ್ ಆಂತರಿಕ ವಲಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ಡಿಕೆಶಿ ಅವರೇ, ಉಭಯ ಸದನದಲ್ಲೂ ವಲಸಿಗರಿಗೆ ಮಣೆಯೇಕೆ ಎಂಬ ಮೂಲ ಕಾಂಗ್ರೆಸ್ಸಿಗರ ಪ್ರಶ್ನೆಗೆ ಯಾರು ಉತ್ತರಿಸುತ್ತಾರೆ? ಎಂದು ಬಿಜೆಪಿ ಕೇಳಿದೆ.