ಔರಂಗಾಬಾದ್, ಡಿ. 13 (DaijiworldNews/HR): ಪಂಚಾಯತ್ ಮುಖ್ಯಸ್ಥರ ಹುದ್ದೆಗೆ ಸ್ಪರ್ಧಿಸಿದ್ದ ವ್ಯಕ್ತಿಯೊಬ್ಬ ಚುನಾವಣೆಯಲ್ಲಿ ಸೋತ ಕಾರಣ ಇಬ್ಬರು ದಲಿತ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ತಮ್ಮ ಸೋಲಿಗೆ ದಲಿತ ಸಮುದಾಯವೇ ಕಾರಣ ಎಂದು ಆರೋಪಿಸಿ ಅಬ್ಯರ್ಥಿ ಬಲವಂತ್ ಸಿಂಗ್ ಎಂಬಾತ ಇಬ್ಬರು ದಲಿತ ಸಮುದಾಯದ ವ್ಯಕ್ತಿಗಳನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು ದಲಿತ ಸಮುದಾಯದ ವ್ಯಕ್ತಿಗಳಿಗೆ ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಬಲವಂತ್ ಅವರು ಹಣ ನೀಡಿದರೂ ಮತ ಹಾಕಲಿಲ್ಲ ಎಂದು ಹೇಳುತ್ತಿರುವುದನ್ನು ಕೇಳಬಹುದು. ಹಾಗೂ ಇಬ್ಬರಿಗೂ ಅವಾಚ್ಯವಾಗಿ ಇಂದಿಸಿ ಕಿವಿಗಳನ್ನು ಹಿಡಿದು ಬಸ್ಕಿ ತೆಗೆಸಿ ಬಳಿಕ ನೆಲದ ಮೇಲೆ ಉಗುಳುವಂತೆ ಹೇಳಿ ಆತನ ಕುತ್ತಿಗೆ ಹಿಡಿದು ಉಗುಳಿದನ್ನು ನೆಕ್ಕುವಂತೆ ಹೇಳಿ ಹಿಂಸೆ ನೀಡುತ್ತಿರುವುದನ್ನು ಕಾಣಬಹುದು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇದಕ್ಕೆ ಪ್ರತಿಕ್ರಿಯಿಸಿದ ಬಲವಂತ್ ಸಿಂಗ್, ಇಬ್ಬರು ವ್ಯಕ್ತಿಗಳು ಕುಡಿದು ಗಲಾಟೆ ಮಾಡುತ್ತಿದ್ದರು ಹಾಗಾಗಿ ಅವರಿಗೆ ಶಿಕ್ಷೆ ನೀಡಿದೆ ಎಂದಿದ್ದಾರೆ.
ಇನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾಂತೇಶ್ ಕುಮಾರ್ ಮಿಶ್ರಾ ಅವರ ನಿರ್ದೇಶನದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.