ನವದೆಹಲಿ, ಡಿ.13 (DaijiworldNews/PY): ಸಂಸದರ ಅಮಾನತು ಆದೇಶವನ್ನು ಹಿಂಪಡೆದುಕೊಳ್ಳದ ಸರ್ಕಾರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದು, ಸೋಮವಾರ ರಾಜ್ಯಸಭೆ ಕಲಾಪದಿಂದ ಸಭಾತ್ಯಾಗ ಮಾಡಿದೆ.
ಇದಕ್ಕೂ ಮೊದಲು ಮಾತನಾಡಿದ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, "ಸರ್ಕಾರವು, 12 ಸಂಸದರ ಅಮಾನತು ಆದೇಶವನ್ನು ಹಿಂಪಡೆಯುವುದನ್ನು ಪರಿಗಣಿಸದೇ ವಿರೋಧ ಪಕ್ಷಗಳನ್ನು ಸದನಕ್ಕೆ ಅಡ್ಡಿಪಡಿಸಲು ಪ್ರೇರೆಪಿಸುತ್ತಿದೆ" ಎಂದು ದೂರಿದ್ದಾರೆ.
"ನಾವು ಏನು ಮಾಡಬೇಕು, ಏನು ಮಾಡಬಾರದು ಎನ್ನುವುದನ್ನು ಸರ್ಕಾರ ನಿರ್ದೇಶಿಸಲು ಆಗುವುದಿಲ್ಲ. ನೀವು ಸದನದ ಉಸ್ತುವಾರಿಯಾಗಿರುವ ಕಾರಣ, 12 ಸದಸ್ಯರ ಅಮಾನತು ಆದೇಶವನ್ನು ರದ್ದುಪಡಿಸಬೇಕು ಎಂದು ನಾವು ಮನವಿ ಮಾಡುತ್ತೇವೆ. ಸದನಕ್ಕೆ ಅಡ್ಡಿಪಡಿಸಲು ಪ್ರತಿಪಕ್ಷಗಳನ್ನು ಪ್ರೇರೇಪಿಸುವುದ ಸರ್ಕಾರದ ಉದ್ದೇಶವಾಗಿದ್ದು, ಹಾಗಾಗಿ ಸಭಾತ್ಯಾಗ ಮಾಡಲು ನಾವು ತೀರ್ಮಾನಿಸಿದ್ದೇವೆ" ಎಂದು ಹೇಳಿದ್ಧಾರೆ.
ಕಾಂಗ್ರೆಸ್ನ ಸೈಯದ್ ನಾಸೀರ್ ಹುಸೇನ್, ಅಖಿಲೇಶ್ ಪ್ರಸಾದ್ ಸಿಂಗ್, ಪೌಲೊ ದೇವಿ ನೇತಮ್, ಎಲಾಮರಮ್ ಕರೀಮ್ ಸಿಪಿಐಎಂ, ಬಿನಾಯ್ ವಿಶ್ವಂ ಸಿಪಿಐ, ಸೇನಾ ಹಾಗೂ ಶಾಂತ ಛೇತ್ರಿ ತೃಣಮೂಲ ಕಾಂಗ್ರೆಸ್, ಛಾಯಾ ವರ್ಮ, ರಿಪುನ್ ಬೋರಾ ಹಾಗೂ ರಾಜಮಣಿ ಪಟೇಲ್, ಪ್ರಿಯಾಂಕಾ ಚತುರ್ವೇದಿ, ಅನಿಲ್ ದೇಸಾಯಿ ಶಿವಸೇನಾ ಸಂಸದರು ಇವರೆಲ್ಲಾ ಅಮಾನತುಗೊಂಡ ಸಂಸದರಾಗಿದ್ದಾರೆ.