ಮೈಸೂರು, ಡಿ. 13 (DaijiworldNews/HR): ಇಂದು ನಡೆಯುತ್ತಿರುವ ಕಾಶಿ ವಿಶ್ವನಾಥ ಕಾರಿಡಾರ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಒಂದು ಲೋಪವಾಗಿದೆ. ವಾರಣಾಸಿ ಜೀರ್ಣೋದ್ದಾರ ಮಾಡಿದವರನ್ನು ಮರೆಯಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಸಾವಿರಾರು ವರ್ಷಗಳ ಹಿಂದೆ ರಾಜ ಮಹಾರಾಜರ ದಾಳಿಗೆ ತುತ್ತಾಗಿ ಕಾಶಿ ಹಾಳಾಗಿತ್ತು. ಅದನ್ನು ಇಂದೂರಿನ ಮಹಾರಾಣಿ ಅಹಲ್ಯ ಬಾಯಿ ಔರ್ಕರ್ ರಕ್ಷಣೆ ಮಾಡಿ ಯುದ್ದಕ್ಕೆ ಬದಲಾಗಿ ಬುದ್ದಿವಂತಿಕೆಯಿಂದ ಕಾಶಿ ವಿಶ್ವನಾಥ ದೇವಾಲಯ ಉಳಿಸಿದ್ದರು ಆದರೆ ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮರೆತಿದ್ದಾರೆ" ಎಂದರು.
ಇನ್ನು ಮೊದಲ ಹಿಂದೂ ಧ್ವಜವನ್ನು ಹಾರಿಸಿದವರು ಅಹಲ್ಯ ಬಾಯಿ ಔರ್ಕರ್. ಅವರು ಯಾವಾಗಲೂ ಶಿವನ ಹೆಸರಿನಲ್ಲೇ ಆಡಳಿತ ಮಾಡಿದ್ದು, ಅವರನ್ನು ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮರೆತಿದ್ದಾರೆ. ಇದು ಚರಿತ್ರೆಯನ್ನು ಮರೆತಂತಾಗಿದೆ. ನೀವು ಚರಿತ್ರೆ ಮುಚ್ಚಿ ಹಾಕಲು ಹೊರಟಿದ್ದೀರ? ತಕ್ಷಣದಲ್ಲಿ ಆ ಸ್ಥಳದಲ್ಲಿ ಅಹಲ್ಯ ಬಾಯಿ ಔರ್ಕರ್ ಪ್ರತಿಮೆ ಸ್ಥಾಪಿಸಿ. ವಾರಣಾಸಿ ವಿಮಾನ ನಿಲ್ದಾಣಕ್ಕೆ ಅಹಲ್ಯ ಬಾಯಿ ಔರ್ಕರ್ ಹೆಸರಿಡಿ ಎಂದು ಪ್ರಧಾನಿ ಮೋದಿಗೆ ವಿಶ್ವನಾಥ್ ಮನವಿ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಒಂದೂವರೆ ಕೋಟಿ ಜನ ಕುರುಬರಿದ್ದಾರೆ. ಕುರುಬ ಜನಾಂಗಕ್ಕೆ ಸೇರಿದ ಅಹಲ್ಯಾಬಾಯಿಯವರನ್ನು ಮರೆತಿರುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದ್ದಾರೆ.