ಬೆಂಗಳೂರು, ಡಿ. 13 (DaijiworldNews/HR): ಹೋಟೆಲ್ನಲ್ಲಿದ್ದ ದಕ್ಷಿಣ ಆಫ್ರಿಕಾ ಪ್ರಜೆಗೆ ಕೊರೊನಾ ಪರೀಕ್ಷೆ ನಕಲಿ ವರದಿ ನೀಡಿ ಪರಾರಿಯಾಗಲು ಸಹಾಯ ಮಾಡಿರುವ ಆರೋಪದಡಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಾಂದರ್ಭಿಕ ಚಿತ್ರ
ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಪ್ರಜೆ ನಗರಕ್ಕೆ ವಿಮಾನದಲ್ಲಿ ಬಂದಿದ್ದು, ನಿಲ್ದಾಣದಲ್ಲಿ ಪರೀಕ್ಷೆ ನಡೆಸಿದಾಗ,ಆತನಿಗೆ ಓಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿತ್ತು. ಮುಂಜಾಗ್ರತಾ ಕ್ರಮವಾಗಿ ಪ್ರಜೆಯನ್ನು ನಗರದ ಹೋಟೆಲೊಂದರ ಕೊಠಡಿಯಲ್ಲಿ ಇರಿಸಲಾಗಿತ್ತು.
ಇನ್ನು ಹೋಟೆಲ್ ಸಿಬ್ಬಂದಿಗೆ ನಕಲಿ ವರದಿ ತೋರಿಸಿ ದಕ್ಷಿಣ ಆಫ್ರಿಕಾ ಪ್ರಜೆ ನಗರದಿಂದ ಪರಾರಿಯಾಗಿದ್ದು, ಅವರನ್ನು ಬಿಟ್ಟು ಕಳುಹಿಸಿದ್ದ ಹೋಟೆಲ್ ಹಾಗೂ ದಕ್ಷಿಣ ಆಫ್ರಿಕಾದ ಪ್ರಜೆ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಈ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ನಕಲಿ ವರದಿ ನೀಡಿದ್ದ ನಾಲ್ವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಮಾಡುತ್ತಿದ್ದಾರೆ