ಬೆಂಗಳೂರು, ಡಿ 13 (DaijiworldNews/MS): ಮತಾಂತರ ಎಂಬುವುದು ವೈಯಕ್ತಿಕ ಆಯ್ಕೆಯಾಗಿದ್ದು ಜೇಸುದಾಸ್, ಉ.ಪ್ರದೇಶ ಶಿಯಾ ಬೋರ್ಡ್ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ.ಹಿಂದೂ ಹೀಗಾಗಿ ಹಿಂದೂ ಧರ್ಮಕ್ಕೆ ಮತಾಂತರವಾಗುವುದಕ್ಕೂ ನಿಷೇಧವಿದೆಯೇ? ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, "ರಾಜ್ಯ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆ ತರುವ ಸಿದ್ದತೆ ನಡೆಸುತ್ತಿದೆ. ಮತಾಂತರ ವೈಯಕ್ತಿಕ ಆಯ್ಕೆ.ಒಬ್ಬ ವ್ಯಕ್ತಿ ಸ್ವಇಚ್ಛೆಯಿಂದ ಯಾವುದೇ ಧರ್ಮವನ್ನು ಆರಿಸಿಕೊಳ್ಳುವ ಆಯ್ಕೆಯನ್ನು ಸಂವಿಧಾನವೇ ನೀಡಿದೆ. ಬಲವಂತದ ಮತಾಂತರಕ್ಕೆ ಸಂವಿಧಾನದಲ್ಲೂ ಅವಕಾಶವಿಲ್ಲ.
ಹೀಗಿರುವಾಗ ಮತಾಂತರ ನಿಷೇಧ ಕಾಯ್ದೆ ತರುವ ಅಗತ್ಯವೇನು? ಇದು ಮತ ರಾಜಕಾರಣ" ಎಂದು ಆರೋಪಿಸಿದ್ದಾರೆ.
"ಕ್ರೈಸ್ತ ಮಿಷಿನರಿಗಳು ಮತಾಂತರ ಮಾಡುತ್ತಿದ್ದಾರೆ ಎಂಬ ಆರೋಪ BJP ಯವರದ್ದು.ಹಾಗೇ ನೋಡಿದರೆ 1971 ರ ಜನಗಣತಿ ಪ್ರಕಾರ ಕ್ರೈಸ್ತರ ಜನಸಂಖ್ಯೆ ಶೇ.2.6ರಷ್ಟಿತ್ತು.81 ರಲ್ಲಿ ಶೇ 2.44, 91 ರಲ್ಲಿ ಶೇ 2.34, 2001ರಲ್ಲಿ ಶೇ2.3 ಹಾಗೂ 11 ರಲ್ಲೂ ಶೇ 2.3 ಇದೆ. ಮತಾಂತರ ಮಾಡಿದ್ದರೆ ಕ್ರೈಸ್ತರ ಸಂಖ್ಯೆ ಏರಿಕೆಯಾಗದೆ ಇಳಿಕೆಯಾಗಿದ್ದು ಏಕೆ?" ಎಂದು ಪ್ರಶ್ನಿಸಿದ್ದಾರೆ
"ಮತಾಂತರ ನಿಷೇಧ ಕಾಯ್ದೆಯಿಂದ ಧರ್ಮ ಧರ್ಮಗಳ ನಡುವೆ ಕಂದಕ ಸೃಷ್ಟಿಯಾಗಲಿದೆಯೇ ಹೊರತು ಧರ್ಮಗಳನ್ನು ಬೆಸೆಯುವುದಿಲ್ಲ. ಈ ಕಾಯ್ದೆ ಸಮಾಜದ ಸಾಮರಸ್ಯ ಹಾಳು ಮಾಡುವುದಲ್ಲದೆ ಅನೈತಿಕ ಪೊಲೀಸ್ಗಿರಿಗೂ ಅವಕಾಶ ಮಾಡಿಕೊಡಲಿದೆ. ಚರ್ಚ್ ಮೇಲೆ ದಾಳಿ ನಡೆದ ಕಳಂಕ ರಾಜ್ಯಕ್ಕಿದೆ.ಈ ಕಾಯ್ದೆ ಜಾರಿಯಾದ ನಂತರ ಇಂತಹ ಅಹಿತಕರ ಘಟನೆಗಳು ಇನ್ನಷ್ಟು ನಡೆಯಲಿವೆ "ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.
"ಸಂವಿಧಾನವೇ ಧಾರ್ಮಿಕ ಸ್ವಾತಂತ್ರ್ಯ ನೀಡಿರುವಾಗ ಮತಾಂತರ ನಿಷೇಧ ಕಾಯ್ದೆ ತರುವುದು ಸಂವಿಧಾನಕ್ಕೆ ಎಸಗುವ ಅಪಚಾರ.ಜೇಸುದಾಸ್, ಉ.ಪ್ರದೇಶ ಶಿಯಾ ಬೋರ್ಡ್ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ. ಅದು ಅವರ ಧಾರ್ಮಿಕ ಸ್ವಾತಂತ್ರ್ಯ. ಹಾಗಾದರೆ ಇನ್ನು ಮುಂದೆ ಹಿಂದೂ ಧರ್ಮಕ್ಕೆ ಮತಾಂತರವಾಗುವುದಕ್ಕೂ ನಿಷೇಧವಿದೆಯೇ? "ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
"ಆಡಳಿತ ವೈಫಲ್ಯ ಹಾಗೂ 40% ಕಮೀಷನ್ ಕಳಂಕದಲ್ಲಿರುವ ರಾಜ್ಯ BJP ಸರ್ಕಾರಕ್ಕೆ ಜನರ ಎದುರು ಮುಖ ತೋರಿಸುವ ನೈತಿಕತೆಯಿಲ್ಲ.ತನ್ನ ವೈಫಲ್ಯ ಹಾಗೂ ಭ್ರಷ್ಟಚಾರ ಮುಚ್ಚಿಕೊಳ್ಳಲು ಇಂತಹ ವಿವಾದಿತ ಕಾಯ್ದೆಯ ಹಿಂದೆ ಬಿದ್ದು ಜನರ ಗಮನ ಬೇರೆಡೆ ಸೆಳೆಯುವ ತಂತ್ರ ಹೂಡುತ್ತಿದೆ. ಇದು ಬಿಜೆಪಿಯವರು ಆಗಿನಿಂದಲೂ ಅನುಸರಿಸಿಕೊಂಡು ಬಂದಿರುವ ಸರಳ ಸಿದ್ದ ಸೂತ್ರ" ಎಂದು ಹೇಳಿದ್ದಾರೆ.