ನವದೆಹಲಿ, ಡಿ 13 (DaijiworldNews/MS): ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಾಲಬೈರವ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಕಾಲಬೈರವನಿಗೆ ಪ್ರಾರ್ಥನೆ ಮಾಡಿ ಆರತಿ ಬೆಳಗಿದರು. ಇಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಾಶಿ ವಿಶ್ವನಾಥನ ದರ್ಶನ ಪಡೆಯಲು ಹೊರಟಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಅವರಿಗೆ ಜನರು ರಸ್ತೆ ಬದಿಯಲ್ಲಿ ನಿಂತು ಅದ್ದೂರಿ ಸ್ವಾಗತ ಕೋರಿದರು. ವಿಶ್ವನಾಥನ ದರ್ಶನ ಬೆನ್ನಲ್ಲೇ, ಕಾರಿಡಾರ್ ಉದ್ಘಾಟನೆ ಮಾಡಲಿದ್ದಾರೆ.
ಈ ಕಾರಿಡಾರ್ನ್ನು 5,000 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು ಮೂರು ಕಡೆ ಕಟ್ಟಡಗಳಿಂದ ಆವೃತವಾಗಿದ್ದ ದೇವಾಲಯದ ಸಂಕೀರ್ಣದ ದಟ್ಟಣೆಯನ್ನು ಇದು ಕಡಿಮೆ ಮಾಡಲಿದೆ. ಸುಮಾರು ರೂ. 399 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಾರಿಡಾರ್ ಇದಾಗಿದೆ. 2019ರ ಮಾರ್ಚ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು.
ಈ ಯೋಜನೆಯು ದೇವಾಲಯದ ಆವರಣ, ವಾರಣಾಸಿ ಸಿಟಿ ಗ್ಯಾಲರಿ, ಮ್ಯೂಸಿಯಂ, ವಿವಿಧೋದ್ದೇಶದ ಆಡಿಟೋರಿಯಂಗಳು, ಸಭಾಂಗಣ, ಭಕ್ತರ ಸೌಲಭ್ಯ ಕೇಂದ್ರ, ಸಾರ್ವಜನಿಕ ಸೌಕರ್ಯ, ಮೋಕ್ಷ ಗೃಹ, ಗೋಡೋವ್ಲಿಯಾ ಗೇಟ್, ಅರ್ಚಕರು ಮತ್ತು ಸೇವಾದಾರರಿಗೆ ಆಶ್ರಯ, ಆಧ್ಯಾತ್ಮಿಕ ಪುಸ್ತಕಗಳಿಗೆ ಸ್ಥಳ ಮತ್ತು ಇತರ ಕಾಮಗಾರಿ ಒಳಗೊಂಡಿದೆ. ಸುಮಾರು 24 ಕಟ್ಟಡಗಳು ನಿರ್ಮಾಣಗೊಂಡಿವೆ. ಪ್ರಮುಖವಾಗಿ ಕಟ್ಟಡದ ಗೋಡೆಗಳ ಮೇಲೆ ಶ್ಲೋಕ, ಸ್ತೋತ್ರ ಕೆತ್ತಲಾಗಿದೆ.