ಬೆಳಗಾವಿ, ಡಿ.13 (DaijiworldNews/PY): "ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಬಿಜೆಪಿ ಮತಾಂತರ ನಿಷೇಧ ಕಾಯ್ದೆ ವಿಧೇಯಕವನ್ನು ಸದನದಲ್ಲಿ ಮಂಡಿಸುವುದಕ್ಕೆ ಹೊರಟಿದೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ದೂರಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮತಾಂತರ ನಿಷೇಧ ಕಾಯ್ದೆ ಮಂಡನೆಯ ಹಿಂದೆ ರಾಜಕೀಯ ದುರುದ್ದೇಶ ಇದೆ. ಹಾಗಾಗಿ ಕಾಂಗ್ರೆಸ್ ಮತಾಂತರ ನಿಷೇಧ ಕಾಯ್ದೆ ಮಂಡನೆಯನ್ನು ಸದನದಲ್ಲಿ ವಿರೋಧಿಸುತ್ತದೆ" ಎಂದಿದ್ದಾರೆ.
"ಮತಾಂತರ ನಿಷೇಧ ಕಾಯ್ದೆಯನ್ನು ಈಗ ಮಂಡಿಸುವ ಅವಶ್ಯಕತೆ ಇರಲಿಲ್ಲ. ರಾಜಕೀಯ ದುರುದ್ದೇಶದಿಂದ ಈ ಕಾಯ್ದೆಯನ್ನು ಬಿಜೆಪಿ ಮಂಡಿಸುತ್ತಾ ಇದೆ. ಪ್ರಚಾರದ ಕಾರಣದಿಂದ ಬಿಜೆಪಿ ಹೀಗೆ ಮಾಡುತ್ತಿದೆ" ಎಂದು ಹೇಳಿದ್ಧಾರೆ.
"ರಾಜ್ಯ ಸರ್ಕಾರ ಒಂದು ಸಮುದಾಯವನ್ನು ಗುರಿಯಾಗಿಸಿ ಹೀಗೆ ಮಾಡುತ್ತಿದೆ. ಅನಗತ್ಯವಾಗಿ ಕಿರುಕುಳ ನೀಡಲು ಈ ರೀತಿ ಮಾಡಲಾಗುತ್ತಿದೆ. ವಿಧೇಯಕ ಮಂಡನೆಗೆ ವಿರೋಧ ಮಾಡಲು ತೀರ್ಮಾನಿಸಿದ್ದೇವೆ" ಎಂದಿದ್ದಾರೆ.