ಬೆಂಗಳೂರು, ಡಿ.13 (DaijiworldNews/PY): ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತಾಂತರ ಕಾಯ್ದೆಯನ್ನು ಸುಟ್ಟು ಹಾಕುತ್ತೇವೆ ಎಂಬ ಮಾಜಿ ಸಚಿವ ಹೆಚ್ ಆಂಜನೇಯ ಅವರ ಹೇಳಿಕೆಗೆ ಕಂದಾಯ ಸಚಿವ ಆರ್ ಅಶೋಕ್ ತಿರುಗೇಟು ನೀಡಿದ್ದು, "ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾನೆ ಮತಾಂತರ ಕಾಯ್ದೆ ಸುಟ್ಟು ಹಾಕುವುದು" ಎಂದು ವ್ಯಂಗ್ಯವಾಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನೂ ಮಾಡಲಾಗಲಿಲ್ಲ. ಅಧಿಕಾರದಲ್ಲಿ ಇಲ್ಲದಿದ್ದ ವೇಳೆ ಅವರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಅಧಿಕಾರಕ್ಕೆ ಬಂದರೆ ಅವರೆಲ್ಲಾ ಮೌನವಾಗುತ್ತಾರೆ. ಅವರು ಮೊದಲು ಕಾಯ್ದೆಯ ತಿರುಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ" ಎಂದಿದ್ದಾರೆ.
"ಮೊದಲು ಪಾಕಿಸ್ತಾನದಲ್ಲಿ ಹಿಂದೂ, ಸಿಖ್ಖರು ಶೇ.20ರಷ್ಟಿದ್ದು, ಈಗ ಶೇ.3ಕ್ಕೆ ಬಂದಿದ್ದಾರೆ. ಅಲ್ಲಿ ಅವರು ಅಲ್ಪಸಂಖ್ಯಾತರು. ಈ ಕುರಿತು ಕೈ ನಾಯಕರು ಮೊದಲು ತಿಳಿದುಕೊಳ್ಳಲಿ" ಎಂದು ಹೇಳಿದ್ದಾರೆ.