ನವದೆಹಲಿ, ಡಿ 13 (DaijiworldNews/MS): ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಬಿಪಿನ್ ರಾವತ್ ಅವರ ಸಾವಿನ ಬಗ್ಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಆದರೆ ರಾವತ್ ಅವರ ಸಾವನ್ನು ಸಂಭ್ರಮಿಸಿ ಕೆಲ ವಿಕೃತರು ಸಂಭ್ರಮಿಸಿದ್ದರು. ಸಿಡಿಎಸ್ ರಾವತ್ ಅವರ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ಗಳನ್ನು ಹಾಕಿ ಸಂಭ್ರಮಿಸಿದ ಜಮ್ಮು ಕಾಶ್ಮೀರ ಬ್ಯಾಂಕ್ ನ ಮಹಿಳಾ ಸಿಬ್ಬಂದಿ ಅಫ್ರಿನಾ ಹಸನ್ ಸಖಾಶ್ ನ್ನು ಬ್ಯಾಂಕ್ ಸಸ್ಪೆಂಡ್ ಮಾಡಿದೆ.
ಜೆ ಅಂಡ್ ಕೆ ಬ್ಯಾಂಕ್ ಬ್ಯಾಂಕ್ ನ ಉದ್ಯೋಗಿಯಾಗಿದ್ದ ಮಹಿಳಾ ಸಿಬ್ಬಂದಿ ಅಫ್ರಿನಾ ದೇಶದ ಹೆಮ್ಮೆಯ ಸೇನಾನಿಗಳ ಸಾವನ್ನು ಅಕ್ಷರಶಃ ಸಂಭ್ರಮಿಸಿದ್ದರು. ಬಿಪಿನ್ ರಾವತ್ ಸೇರಿದಂತೆ 13 ಮಂದಿಯ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಗುವಿನ ಎಮೋಜಿಹಾಕಿದ್ದರು.
ಇದು ನೆಟ್ಟಿಗರ ಗಮನಕ್ಕೆ ಬಂದಿದ್ದು, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜೆ ಅಂಡ್ ಕೆ ಬ್ಯಾಂಕ್ ಅನ್ನು ಒತ್ತಾಯಿಸಿದ್ದರು. ಇದರ ವಿರುದ್ಧ ಎಚ್ಚೆತ್ತ ಬ್ಯಾಂಕ್ ಆಕ್ಷೇಪಾರ್ಹ ಕಾಮೆಂಟ್ ಹಾಕಿದ್ದ ತನ್ನ ಸಿಬ್ಬಂದಿಯನ್ನು ಕೊನೆಗೂ ಸಸ್ಪೆಂಡ್ ಮಾಡಿ, ಮನೆಗೆ ಕಳುಹಿಸಿದೆ.
ಬ್ಯಾಂಕ್ನ ಹಿತಾಸಕ್ತಿ/ನಿಯಮಗಳಿಗೆ ವಿರುದ್ಧವಾಗಿ ಉದ್ಯೋಗಿಗಳು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ದುರುಪಯೋಗಪಡಿಸಿಕೊಳ್ಳುವುದರ ವಿರುದ್ಧ ಕಾಲಕಾಲಕ್ಕೆ ಪುನರಾವರ್ತಿತ ಸುತ್ತೋಲೆಗಳನ್ನು ಹೊರಡಿಸಿದ್ದರೂ, ನಮ್ಮ ಉದ್ಯೋಗಿಯೊಬ್ಬರು ದುರಂತ ಅಪಘಾತದ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಅವಹೇಳನಕಾರಿ ಕಾಮೆಂಟ್ಗಳು/ಟೀಕೆಗಳನ್ನು ಮಾಡಿದ್ದಾರೆ. ಅವರ ವಿರುದ್ಧ ಶಿಸ್ತಿನ ಪ್ರಕ್ರಿಯೆಗಳು ಬಾಕಿಯಿದ್ದು, ಈ ಹಿನ್ನಲೆಯಲ್ಲಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.