ವಾರಾಣಸಿ, ಡಿ. 13 (DaijiworldNews/HR): ಬಹುನಿರೀಕ್ಷಿತ ವಾರಾಣಸಿಯ ಕೇಂದ್ರ ಭಾಗದಲ್ಲಿ ನಿರ್ಮಿಸಿರುವ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಲಿದ್ದಾರೆ.
ಸುಮಾರು 339 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾರಿಡಾರ್ ಯೋಜನೆಯು ಎರಡು ಐತಿಹಾಸಿಕ ಧಾರ್ಮಿಕ ಕೇಂದ್ರಗಳ ನಡುವೆ ಸಂಪರ್ಕ ಸೇತುವೆ ಆಗಲಿದ್ದು, ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯ ಮೊದಲ ಹಂತವು ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಗಂಗಾ ಘಾಟ್ಗಳ ನಡುವೆ ಸಂಪರ್ಕ ಕಲ್ಪಿಸಲಿದೆ.
ಇನ್ನು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಸಂತರು, ಸ್ವಾಮೀಜಿಗಳು, ಸ್ಥಳೀಯ ವ್ಯಾಪಾರಿಗಳಲ್ಲಿ ಸಂಭ್ರಮ ಮನೆಮಾಡಿದೆ.
ಈ ದೇಗುಲ 1780ರಲ್ಲಿ ಮಹಾರಾಣಿ ಅಹಿಲ್ಯಾಬಾಯಿ ಹೋಳ್ಕರ್ ಅವಧಿಯಲ್ಲಿ ಪುನರ್ನಿರ್ಮಾಣಗೊಂಡಿದ್ದು, ಬಳಿಕ 19ನೇ ಶತಮಾನದಲ್ಲಿ ಮಹಾರಾಜ ರಣಜಿತ್ ಸಿಂಗ್ 'ಚಿನ್ನದ ಕಳಶ' ಅಳವಡಿಸಿದ್ದರು.
ಇನ್ನು ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಧ್ಯಾಹ್ನ 1 ಗಂಟೆಗೆ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, 339 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶ್ರೀ ಕಾಶಿ ವಿಶ್ವನಾಥ ಧಾಮದ ಮೊದಲ ಹಂತವನ್ನು ಉದ್ಘಾಟಿಸಲಿದ್ದಾರೆ.