ನವದೆಹಲಿ, ಡಿ.12 (DaijiworldNews/PY): "1971ರಲ್ಲಿ ನೇರ ಯುದ್ದವನ್ನು ಗೆದ್ದ ಭಾರತವು, ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯ ವಿರುದ್ದ ನಡೆಯುತ್ತಿರುವ ಪರೋಕ್ಷ ಯುದ್ಧವನ್ನೂ ಗೆಲ್ಲುತ್ತದೆ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
1971ರ ಯುದ್ಧದಲ್ಲಿ ಪಾಕಿಸ್ಥಾನದ ವಿರುದ್ಧ ಭಾರತ ಗಳಿಸಿದ ವಿಜಯದ ಸ್ಮರಣಾರ್ಥ ನಡೆದ ಸುವರ್ಣ ಮಹೋತ್ಸವ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, "ಭಯೋತ್ಪಾದನೆ ಹಾಗೂ ಇತರ ಚಟುವಟಿಕೆಗಳನ್ನು ಪಾಕ್ ಉಲ್ಲೇಖಿಸುವ ಮೂಲಕ ಭಾರತವನ್ನು ಒಡೆಯಲು ಇಚ್ಛಿಸುತ್ತಿದೆ" ಎಂದಿದ್ದಾರೆ.
"1971ರ ಯುದ್ಧವು ಭಾರತದ ವಿಭಜನೆಯನ್ನು ತೋರಿಸಿತು. ಸ್ವಾತಂತ್ರ್ಯದ ಸಮಯದಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಧರ್ಮದ ಹೆಸರಿನಲ್ಲಿ ಐತಿಹಾಸಿಕ ತಪ್ಪು ನಡೆಯಿತು" ಎಂದು ಹೇಳಿದ್ಧಾರೆ.
"ನೇರ ಯುದ್ಧವನ್ನು ನಾವು ಗೆದ್ದಿದ್ದೇವೆ. ಪರೋಕ್ಷ ಯುದ್ಧವನ್ನು ಸಹ ನಾವು ಗೆಲ್ಲುತ್ತೇವೆ ಎಂದು ನಾನು ಸಂಪೂರ್ಣವಾಗಿ ಭರವಸೆ ನೀಡಬಲ್ಲೆ" ಎಂದಿದ್ಧಾರೆ.
"ಈ ಸ್ವರ್ಣಿಮ್ ವಿಜಯ್ ಪರ್ವ್ ಅನ್ನು ಭಾರತ ಸರ್ಕಾರವು ಅಧಿಕ ವೈಭವಯುತವಾಗಿ ನಡೆಸಲು ಯೋಜಿಸಿತ್ತು. ಆದರೆ, ದೇಶದ ಮೋದಲ ಸಿಡಿಎಸ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಹಾಗೂ ಇತರ 11 ಸಶಸ್ತ್ರ ಪಡೆಗಳ ಸಿಬ್ಬಂದಿಗಳ ಅಕಾಲಿಕ ಮರಣದ ಕಾರಣ ಈ ಕಾರ್ಯಕ್ರಮವನ್ನು ಸರಳವಾಗಿ ನಡೆಸಲು ತೀರ್ಮಾನಿಸಲಾಯಿತು" ಎಂದು ತಿಳಿಸಿದ್ದಾರೆ.