ಬಾಗಲಕೋಟೆ, ಡಿ.12 (DaijiworldNews/HR): ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿಯವರು ಬಲವಂತವಾಗಿ ಜಾರಿಗೆ ತಂದರೆ, ನಾವು ಬಂದ ಮೇಲೆ ಇವರು ಮಾಡಿದ ಕಾಯ್ದೆ ಸುಟ್ಟು ಹಾಕಿ, ಜನಪರವಾದ ಕಾಯ್ದೆ ತರ್ತೀವಿ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಎಚ್.ಆಂಜನೇಯ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮತಾಂತರ ಓರ್ವ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯ. ಅವರು ರಾಮ ರಾಮ ಅಂತಾರೆ. ರಾಮ ಏನು ಇವರಪ್ಪನ ಮನೆ ಸ್ವತ್ತಲ್ಲ. ನಾನೂ ಹಿಂದು ಧರ್ಮದಲ್ಲಿ ಇದ್ದೇನೆ. ರಾಮನಿಗೆ ಹತ್ತಿರವಾದ ಆಂಜನೇಯ ನನ್ನ ಹೆಸರು. ಯಾವ ಧರ್ಮದಲ್ಲಿ ಇರಬೇಕು ಅಂತ ನನಗೆ ಬಿಟ್ಟಿದ್ದು" ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು "ಡಾ.ಅಂಬೇಡ್ಕರ್ ಅವರು ದುರಾದೃಷ್ಟವಶಾತ್ ಹಿಂದು ಆಗಿ ಹುಟ್ಟಿದ್ದೇನೆ, ಹಿಂದುವಾಗಿ ಸಾಯಲ್ಲ ಅಂತ ಭೌದ್ಧ ಧರ್ಮ ಸ್ವೀಕರಿಸಿದ್ರು. ಹಿಂದು ಧರ್ಮದಲ್ಲಿ ಮಲ ತಿನ್ನುವ ನಾಯಿ ಮತ್ತು ಬೆಕ್ಕನ್ನು ಮನೆಯಲ್ಲಿ ಬಿಡ್ತೀರಿ. ಆದರೆ, ಮನುಷ್ಯನಾಗಿರುವ ನನ್ನನ್ನ ಸೌಜನ್ಯವಾಗಿಯೂ ಕಾಣದ ಸಮಾಜ ಇದು" ಎಂದರು.
"ಕ್ರೈಸ್ತರು ಮಾತ್ರ ಧರ್ಮ ಬೋಧನೆ ಮಾಡ್ತಾರೆ. ಮತಾಂತರ ಆಗಿದ್ರೆ ಹಿಂದು ಪ್ರತಿಪಾದಕರೂ ನಮ್ಮ ಧರ್ಮ ಬಹಳ ಚೆನ್ನಾಗಿದೆ ಅಂತ ಹೇಳಿ ಧರ್ಮದಲ್ಲಿ ಉಳಿಸಿಕೊಳ್ಳಲಿ. ಇದಕ್ಕೆ ಯಾವುದೇ ಅಡ್ಡಿ ಇಲ್ವಲ್ಲ" ಎಂದು ಹೇಳಿದ್ದಾರೆ.