ಬಾಗಲಕೋಟೆ, ಡಿ.12 (DaijiworldNews/PY): "ಬೆಳಗಾವಿ ಅಧಿವೇಶನದಲ್ಲೇ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕು" ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯ ಸರ್ಕಾರ, ಮತಾಂತರ ನಿಷೇಧ ಕಾಯ್ದೆ ವಿಷಯದಲ್ಲಿ ಸ್ಪಷ್ಟ ತೀರ್ಮಾನ ಕೈಗೊಳ್ಳಲೇಬೇಕು. ಇದರೊಂದಿಗೆ ಮತಾಂತರಕ್ಕೆ ಕಾರಣವಾದ ಸಾಮಾಜಿಕ, ಆರ್ಥಿಕ ಸಂಗತಿಗಳ ಕುರಿತು ಅಧ್ಯಯನ ನಡೆಸಿ ಅವುಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು"ಎಂದಿದ್ದಾರೆ.
"ರಾಜ್ಯದಲ್ಲಿ ಎಲ್ಲಾ ಜಾತಿ ವರ್ಗದ ಜನರನ್ನು ಅವರ ಆರೋಗ್ಯದ ಸ್ಥಿತಿ ಹಾಗೂ ಬಡತನವನ್ನು ಮುಂದಿಟ್ಟುಕೊಂಡು ದೊಡ್ಡ ಪ್ರಮಾಣದಲ್ಲಿ ಮತಾಂತರಗೊಳಿಸುವ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸಬೇಕು" ಎಂದು ಹೇಳಿದ್ದಾರೆ.
"ಸಿಡಿಎಸ್ ಬಿಪಿನ್ ರಾವತ್ ಅವರ ಸಾವಿಗೆ ಕೆಲಸ ವಿಕೃತ ಮನಸ್ಸುಗಳು ಸಂಭ್ರಮಿಸುತ್ತಿವೆ. ಅವರು ದೇಶದ್ರೋಹಿಗಳು. ಅಂತವರ ವಿರುದ್ದ ಕೇಂದ್ರ ಗೃಹ ಇಲಾಖೆ ಹಾಗೂ ಆಯಾ ರಾಜ್ಯ ಸರ್ಕಾರಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು" ಎಂದಿದ್ದಾರೆ.