ಬೆಳಗಾವಿ, ಡಿ.12 (DaijiworldNews/PY): ಅಪರಿಚಿತ ವ್ಯಕ್ತಿಯೋರ್ವ ಚರ್ಚ್ ಫಾದರ್ ಮೇಲೆ ತಲ್ವಾರ್ನಿಂದ ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ಬಾಕ್ಸೈಟ್ ರಸ್ತೆಯಲ್ಲಿರುವ ಜೋಸೆಫ್ ದಿ ವರ್ಕರ್ ಚರ್ಚ್ ಫಾದರ್ ಫ್ರಾನ್ಸಿಸ್ ಮೇಲೆ ಹಲ್ಲೆಗೆ ಯತ್ನಿಸಿದ್ದು, ಫಾದರ್ ಫ್ರಾನ್ಸಿಸ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಚರ್ಚ್ಗೆ ಸೇರಿದ್ದ ಮನೆಯಲ್ಲಿ ತಂಗಿದ್ದ ಫಾದರ್ ಮನೆಯಿಂದ ಹೊರಗೆ ಬರುವ ಸಂದರ್ಭ, ದುಷ್ಕರ್ಮಿ ಕೌಂಪೌಂಡ್ ಜಿಗಿದು ಮೊದಲ ಮಹಡಿಯ ಮನೆ ಮುಂದೆ ಬಂದಿದ್ದು, ಫಾದರ್ ಬಾಗಿಲು ತೆರೆಯುತ್ತಿದ್ದಂತೆ ದುಷ್ಕರ್ಮಿ ತಲ್ವಾರ್ನಿಂದ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
ದಾಳಿಯಿಂದ ತಪ್ಪಿಸಿಕೊಂಡ ಫಾದರ್ ಫ್ರಾನ್ಸಿಸ್ ಕೆಳಗಿಳಿದು ಹೊರಗೆ ಬಂದಿದ್ದಾರೆ. ಈ ಸಂದರ್ಭ ಸ್ಥಳೀಯರು ಧಾವಿಸುತ್ತಿದ್ದಂತೆ ದುಷ್ಕರ್ಮಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ದುಷ್ಕರ್ಮಿಯ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಎಪಿಎಂಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಘಟನೆಯ ಬಗ್ಗೆ ಫಾದರ್ ಫ್ರಾನ್ಸಿಸ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.