ಹುಬ್ಬಳ್ಳಿ, ಡಿ.12 (DaijiworldNews/PY): "ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬಂದಲ್ಲಿ ಕ್ರಿಶ್ಚಿಯನ್ನರು ಭಯಪಡುವ ಅವಶ್ಯಕತೆ ಇಲ್ಲ. ಇದರಿಂದ ಅವರ ಧಾರ್ಮಿಕ ಆಚರಣೆಗೆ ಯಾವುದೇ ರೀತಿಯಾದ ಕುತ್ತು ಬರುವುದಿಲ್ಲ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮತಾಂತರ ಕಾಯ್ದೆ ಜಾರಿಯಾಗಬೇಕು ಎಂದು ಬಹಳಷ್ಟು ಮಂದಿಯ ಒತ್ತಾಸೆಯೂ ಆಗಿದೆ. ಬಡತನ, ಮನೆಯ ಪರಿಸ್ಥಿತಿ ದುರುಪಯೋಗಪಡಿಸಿಕೊಂಡು ಹಾಗೂ ಆಮಿಷ ಒಡ್ಡಿ ಮತಾಂತರಕ್ಕೆ ಯತ್ನಿಸುತ್ತಿರುವವರಿಗೆ ಕಡಿವಾಣ ಹಾಕಲು ಈ ಕಾಯ್ದೆ ಅನುಕೂಲವಾಗಲಿದೆ. ಇದರ ಬಗ್ಗೆ ಸ್ವಾತಂತ್ರ್ಯ ನಂತರ ಅನೇಕ ಬಾರಿ ಚರ್ಚೆಯಾಗಿದೆ" ಎಂದು ಹೇಳಿದ್ದಾರೆ.
"ಈ ಬಗ್ಗೆ ಕಾನೂನು ಇಲಾಖೆ ಕರಡು ಸಿದ್ದಪಡಿಸುತ್ತಿದ್ದು, ಡಿ.13ರಂದು ಪ್ರಾರಂಭವಾಗಲಿರುವ ಬೆಳಗಾವಿ ಅಧಿವೇಶನದಲ್ಲಿ ಚರ್ಚೆಯಾಗಲಿದೆ. ಯಾರ ಭಾವನೆಗೂ ಧಕ್ಕೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಕಾಯ್ದೆ ಜಾರಿಗೆ ಬಂದರೆ ಕ್ರಿಶ್ಚಿಯನ್ನರು ಆತಂಕಪಡುವ ಅವಶ್ಯಕತೆ ಇಲ್ಲ" ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಖಾತೆ ಹ್ಯಾಕ್ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದವರು, "ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಹಲವಾರು ಕಡೆದ ಹ್ಯಾಕ್ ಮಾಡುವ ಘಟನೆಗಳು ನಡೆಯುತ್ತಿವೆ. ಅವುಗಳಿಗೆ ತಾಂತ್ರಿಕ ಬಲದಿಂದ ಕಡಿವಾಣ ಹಾಕುವ ಕಾರ್ಯ ಮಾಡುತ್ತಿದ್ದೇವೆ" ಎಂದು ಹೇಳಿದ್ದಾರೆ.