ನವದೆಹಲಿ, ಡಿ.12 (DaijiworldNews/PY): "ಕೊರೊನಾ ದೃಢಪಡುವಿಕೆ ಪ್ರಮಾಣ ಶೇ.10ಕ್ಕಿಂತ ಅಧಿಕ ಇರುವ ಪ್ರದೇಶಗಳಲ್ಲಿ ಹಾಗೂ ಆಕ್ಸಿಜನ್ಸಹಿತ ಹಾಸಿಗೆಗಳಿಗೆ ಬೇಡಿಕೆ ಇರುವಲ್ಲಿ ರಾತ್ರಿ ಕರ್ಫ್ಯೂ, ಅಧಿಕ ಮಂದಿ ಸೇರುವುದಕ್ಕೆ ನಿಷೇಧದಂತಹ ಕ್ರಮ ಕೈಗೊಳ್ಳಿ" ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಲಿಗೆ ಸೂಚನೆ ನೀಡಿದೆ.
"ಸದ್ಯಕ್ಕೆ ದೇಶದಲ್ಲಿ ಇಂತಹ ಜಿಲ್ಲೆಗಳು ಎಂಟು ಮಾತ್ರ ಇವೆ. ಕೊರೊನಾ ದೃಢಪಡುವಿಕೆ ದರವು ಶೇ.5 ಹಾಗೂ ಶೇ.10ರ ನಡುವೆ ಇರುವ 19 ಜಿಲ್ಲೆಗಳಲ್ಲಿಯೂ ಹೆಚ್ಚು ನಿಗಾ ಅಗತ್ಯ. ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯದ ಓಮೈಕ್ರಾನ್ ರೂಪಾಂತರ ತಳಿಯು ಸುಮಾರು 60 ದೇಶಗಳಿಗ ಹರಡಿದೆ. ಹಾಗಾಗಿ ಕೊರೊನಾದ ಹೆಚ್ಚು ಪ್ರಕರಣಗಳು ಪತ್ತೆಯಾದ 70 ಕ್ಲಸ್ಟರ್ಗಳಲ್ಲಿ ಸಹ ಹೆಚ್ಚು ಗಮನ ಇರಿಸಬೇಕು" ಎಂದು ಕೇಂದ್ರ ತಿಳಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
"ನವೆಂಬರ್ನ ಕೊನೆಯ ಎರಡು ವಾರಗಳಲ್ಲಿ ಕೊರೊನಾದ ಹೊಸ ಪ್ರಕರಣಗಳು ತೀವ್ರವಾಗಿ ಹೆಚ್ಚಳವಾದ ಆರು ರಾಜ್ಯಗಳ 30 ಜಿಲ್ಲೆಗಳಲ್ಲಿಯೇ ಹೆಚ್ಚಿನ ಕ್ಲಸ್ಟರ್ಗಳಿವೆ. ತುಮಕೂರು, ಜಮ್ಮು-ಕಾಶ್ಮೀರದ ಕಠುವಾ, ಒಡಿಶಾದ ಧೆನ್ಕನಲ್ ಹಾಗೂ ಕಂಧಮಾಲ್ ಜಿಲ್ಲೆಗಳಲ್ಲಿ ಪ್ರಕರಣಗಳು ತೀವ್ರವಾಗಿ ಹೆಚ್ಚಿದ್ದವು. ಬೆಂಗಳೂರು ನಗರ ಜಿಲ್ಲೆಯಲ್ಲಿಯೂ ಹೆಚ್ಚಿನ ನಿಗಾ ಅಗತ್ಯ" ಎಂದಿದೆ.