ಅಸ್ಸಾಂ, ಡಿ 11 (DaijiworldNews/MS): ಅರ್ಜೆಂಟೀನಾದ ಫುಟ್ಬಾಲ್ ದಿಗ್ಗಜ ದಿವಂಗತ ಡಿಯಾಗೋ ಮರಡೋನಾ ಅವರ ಕಳುವಾಗಿದ್ದ ಕೈ ಗಡಿಯಾರವನ್ನು ಅಸ್ಸಾಂನಲ್ಲಿ ಪತ್ತೆಹಚ್ಚಲಾಗಿದೆ. ಸುಮಾರು 20 ಲಕ್ಷ ಮೌಲ್ಯದ ಈ ವಾಚ್ ಅಸ್ಸಾಂ ಮೂಲದ ವ್ಯಕ್ತಿಯ ಬಳಿ ಇತ್ತು.
ಈ ಕುರಿತು ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ, ದುಬೈ ಪೊಲೀಸರು ನೀಡಿದ ಮಾಹಿತಿ ಮೇರೆಗೆ ನಮ್ಮ ಅಸ್ಸಾಂ ಪೊಲೀಸರು ಚರೈಡಿಯೊ ಜಿಲ್ಲೆಯಿಂದ ವಾಜಿದ್ ಹುಸೇನ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆತನಿಂದ ಫುಟ್ಬಾಲ್ ದಿಗ್ಗಜ ಮರಡೋನಾ ಬಳಸುತ್ತಿದ್ದ ವಾಚ್ ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ದುಬೈನಿಂದ ಅಸ್ಸಾಂ ತಲುಪಿದ್ದು ಹೇಗೆ?
ಫುಟ್ಬಾಲ್ ಕ್ರೀಡಾ ಜಗತ್ತಿನಲ್ಲಿ 2020ರ ನವೆಂಬರ್ನಲ್ಲಿ ಹೃದಯಾಘಾತದಿಂದ ನಿಧನ ಮರಡೋನಾ ಹೆಸರು ಸುಪ್ರಸಿದ್ಧ. ಫುಟ್ ಬಾಲ್ ತಾರೆ ಮರಡೋನಾ ಅವರ ಹಸ್ತಾಕ್ಷರಗಳು, ವಿಶೇಷ ವಸ್ತುಗಳನ್ನು ಜತನವಾಗಿ ಕಾಯುತ್ತಿದ್ದ ದುಬೈನ ಸಂಗ್ರಹಾಲಯದ ಭದ್ರತೆ ನೋಡಿಕೊಳ್ಳುತ್ತಿದ್ದ ಸಂಸ್ಥೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ವಾಜಿದ್ ಹುಸೇನ್, ಸ್ವತಃ ಮರಡೋನಾ ಅವರ ಹಸ್ತಾಕ್ಷರವಿದ್ದ ಲಿಮಿಟೆಡ್ ಎಡಿಷನ್ ಹೆರಿಟೇಜ್ ಲಕ್ಷುರಿ ವಾಚ್ ಅನ್ನು ಕಳ್ಳತನ ಮಾಡಿದ್ದ. ಆ ಬಳಿಕ ಈ ವರ್ಷದ ಆಗಸ್ಟ್ ನಲ್ಲಿ ತಂದೆಗೆ ಅನಾರೋಗ್ಯವಾದ ಕಾರಣ ನೀಡಿ ದುಬೈನಿಂದ ಅಸ್ಸಾಂಗೆ ಹಿಂತಿರುಗಿದ್ದ.
ಕೇಂದ್ರ ಗುಪ್ತಚರ ಮಾಹಿತಿಯಂದ ದುಬೈ ಪೊಲೀಸ್ ನೀಡಿದ ಮಾಹಿತಿ ಪಡೆದ ಅಸ್ಸಾಂ ಪೊಲೀಸ್, ಶನಿವಾರ ಮುಂಜಾನೆ 4ರ ಸುಮಾರಿಗೆ ಆರೋಪಿಯನ್ನು ಆತನ ಮನೆಯಲ್ಲಿಯೇ ಬಂಧಿಸಿದ್ದಾರೆ.