ಬೆಂಗಳೂರು, ಡಿ.11 (DaijiworldNews/HR): ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರವು ಮತಾಂತರ ಕಾಯ್ದೆಯನ್ನು ಜಾರಿಗೊಳಿಸುವ ಹುನ್ನಾರ ನಡೆಸಿದ್ದು, ಇದನ್ನು ಕಾಂಗ್ರೆಸ್ ಶತಾಯಗತಾಯ ವಿರೋಧಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಖಾಸಗಿಯಾಗಿ ಹಾಗೂ ಸರ್ಕಾರಿ ವತಿಯಿಂದ ಮಸೂದೆ ಮಂಡನೆ ಮಾಡುವ ತಂತ್ರಗಾರಿಕೆಯನ್ನು ಬಿಜೆಪಿ ಅನುಸರಿಸುತ್ತಿದ್ದು, ಅವರು ಯಾವುದೇ ರೂಪದಲ್ಲಿ ಮಸೂದೆ ತಂದರೂ ನಾವು ವಿರೋಧಿಸುತ್ತೇವೆ" ಎಂದರು.
ಇನ್ನು ಮತಾಂತರ ನಿಷೇಧ ಕಾಯ್ದೆ ಕೇವಲ ರಾಜ್ಯಕ್ಕೆ ಸಂಬಂಧಪಟ್ಟ ವಿಷಯವಲ್ಲ. ವಿದೇಶದಲ್ಲೂ ಇದು ಚರ್ಚೆಯಾಗುತ್ತಿದ್ದು, ರಾಜ್ಯ ಸರ್ಕಾರದ ನಡವಳಿಕೆಗಳ ಬಗ್ಗೆ ಆಕ್ಷೇಪಗಳು ಕೇಳಿಬರುತ್ತಿವೆ" ಎಂದಿದ್ದಾರೆ.
ಮತಾಂತರ ನಿಷೇಧ ಕಾಯ್ದೆಯಿಂದ ಅಭಿವೃದ್ಧಿಗೆ ಏನಾದರೂ ಸಂಬಂಧವಿದೆಯೇ? ಎಂದು ಪ್ರಶ್ನಿಸಿರುವ ಅವರು, ಚುನಾವಣೆ ಕಾರಣಕ್ಕಾಗಿ ಮಸೂದೆ ತರುವ ಬಿಜೆಪಿ ಹುನ್ನಾರ ಖಂಡನೀಯ ಎಂದು ಹೇಳಿದ್ದಾರೆ.