ಚೆನ್ನೈ, ಡಿ.11 (DaijiworldNews/PY): ತಮಿಳುನಾಡಿನ ಮಾಜಿ ಸಿಎಂ ಜೆ ಜಯಲಲಿತಾ ಅವರ ಪೋಯಸ್ ಗಾರ್ಡ್ನಲ್ಲಿರುವ ವೇದ ನಿವಾಸವು ಸೋದರ ಸೊಸೆ ದೀಪಾ ಜಯಕುಮಾರ್ ಅವರ ಕೈ ಸೇರಿದೆ.
ಮನೆ ಕೀ ಅನ್ನು ಚೆನ್ನೈ ಜಿಲ್ಲಾಡಳಿತವು ದೀಪಾ ಜಯಕುಮಾರ್ ಅವರಿಗೆ ಹಸ್ತಾಂತರಿಸಿದೆ.
ಈ ವೇಳೆ ಮಾತನಾಡಿದ ದೀಪಾ ಜಯಕುಮಾರ್, "ನನ್ನ ಚಿಕ್ಕಮ್ಮನ ಅನುಪಸ್ಥಿತಿಯಲ್ಲಿ ಇದೇ ಮೊದಲ ಬಾರಿಗೆ ನಾನು ಈ ಮನೆಗೆ ಭೇಟಿ ನೀಡುತ್ತಿದ್ದೇನೆ. ಅವರಿಲ್ಲದೇ ಈ ಮನೆ ಖಾಲಿ ಎನಿಸುತ್ತಿದೆ. ಚಿಕ್ಕಮ್ಮ ಬಳಸುತ್ತಿದ್ದ ಪೀಠೋಪಕರಣಗಳನ್ನು ತೆಗೆದುಹಾಕಲಾಗಿದೆ" ಎಂದು ದೂರಿದ್ದಾರೆ.
"ಮನೆಯಲ್ಲಿದ್ದ ಹಲವಾರು ವಸ್ತುಗಳು ಕಾಣೆಯಾಗಿವೆ. ಶಶಿಕಲಾ ಅವರು ಮನಸ್ಸಿಗೆ ಬಂದಂತೆ ಜಯಲಲಿತಾ ಅವರ ಮನೆಯನ್ನು ಬದಲಾಯಿಸಿರುವುದು ಸರಿಯಲ್ಲ" ಎಂದು ಆರೋಪಿಸಿದ್ದಾರೆ.
ಮದ್ರಾಸ್ ಹೈಕೋರ್ಟ್ನ ಏಕಸದಸ್ಯ ಪೀಠವು ನವೆಂಬರ್ 24ರಂದು ಜಯಲಲಿತಾ ಅವರ ವೇದ ನಿಲಯವನ್ನು ಸ್ವಾಧೀನಪಡಿಸಿಕೊಳ್ಳುವ ಆದೇಶವನ್ನು ರದ್ದುಗೊಳಿಸಿದ್ದು, ವಾರಸುದಾರರಿಗೆ ಮನೆಯನ್ನು ಹಸ್ತಾಂತರ ಮಾಡುವಂತೆ ಆದೇಶ ನೀಡಿತ್ತು .
ದೀಪಾ ಹಾಗೂ ಅವರ ಸಹೋದರ ದೀಪಕ್ ಅವರು ವೇದ ನಿಲಯವನ್ನು ಸ್ವಾಧೀನಪಡಿಸಿಕೊಂಡಿರುವುದನ್ನು ಪ್ರಶ್ನಿಸಿದ್ದು, ಈ ಬಗ್ಗೆ ಅರ್ಜಿ ಸಲ್ಲಿಸಿದ್ದರು. ಈಗ ಮದ್ರಾಸ್ ತೀರ್ಪಿನ ಪ್ರಕಾರ ಜಯಲಲಿತಾ ಅವರ ಮನೆಯನ್ನು ದೀಪಾ ಅವರಿಗೆ ಹಸ್ತಾಂತರಿಸಲಾಗಿದೆ.