ತಿರುವನಂತಪುರ, ಡಿ 11 (DaijiworldNews/MS): ಮಲಯಾಳಂನ ಖ್ಯಾತ ನಿರ್ದೇಶಕ ಅಲಿ ಅಕ್ಬರ್ ಹಾಗೂ ಅವರ ಪತ್ನಿ ಹಿಂದೂ ಧರ್ಮಕ್ಕೆ ಮತಾಂತರವಾಗಲು ನಿರ್ಧರಿಸಿದ್ದಾರೆ. ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ದುರಂತ ಸಾವನ್ನು ಆಚರಿಸಿದವರ ವಿರುದ್ಧ ಪ್ರತಿಭಟನೆಗಾಗಿ ಇಸ್ಲಾಂ ಧರ್ಮವನ್ನು ತೊರೆಯುವುದಾಗಿ ಹೇಳಿದ್ದಾರೆ. ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಅಕ್ಬರ್ ಈ ಘೋಷಣೆ ಮಾಡಿದ್ದಾರೆ.
"ಡಿಎಸ್ ಬಿಪಿನ್ ರಾವತ್ ಅವರ ದುರ್ಮರಣಕ್ಕೆ ಕೆಲವು ಮುಸ್ಲಿಮರು ಸಂತಸ, ನಗುವಿನ ಎಮೋಜಿ ಹಾಕಿ ಹರ್ಷೋದ್ಗಾರ ಮಾಡಿದ್ದರು. ಸಿಡಿಎಸ್ ಬಿಪಿನ್ ರಾವತ್ ಅವರ ಸಾವನ್ನು ಸಂಭ್ರಮಿಸಿದ್ದ ದೇಶವಿರೋಧಿ ಮುಸ್ಲಿಮರ ನಡೆಯನ್ನು ಸಮುದಾಯದ ಯಾವುದೇ ಓರ್ವ ನಾಯಕನೂ ಖಂಡಿಸಿಲ್ಲ. ಆದ್ದರಿಂದ ಇಸ್ಲಾಮ್ ಧರ್ಮದಲ್ಲಿ ನನಗೆ ನಂಬಿಕೆ ಹೋಗಿದೆ " ಎಂದು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಡಿಯೋ ಮೂಲಕ ತಿಳಿಸಿದ್ದಾರೆ.
ಈ ವಿಚಾರವನ್ನು ಪತ್ನಿಯೊಂದಿಗೆ ಚರ್ಚಿಸಿದ ಬಳಿಕ ಇಸ್ಲಾಂ ಧರ್ಮ ತ್ಯಜಿಸಲು ನಿರ್ಧರಿಸಿರುವುದಾಗಿ ಅಕ್ಬರ್ ಹೇಳಿದ್ದಾರೆ. 20ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ 58ರ ಹರೆಯದ ಅಕ್ಬರ್ ಅವರು 1988ರಲ್ಲಿ ಅತ್ಯುತ್ತಮ ಚೊಚ್ಚಲ ನಿರ್ದೇಶಕರಿಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಖ್ಯಾತಿಯನ್ನು ಗಳಿಸಿದ್ದರು.
ಅಲಿ ಅವರಿಗೆ ಹಲವಾರು ಮುಸ್ಲಿಮರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಇತ್ತೀಚೀನ ಮಾಹಿತಿಯ ಪ್ರಕಾರ ಆ ವಿಡಿಯೋ ಸಾಮಾಜಿಕ ಜಾಲತಾಣದಿಂದ ಕಾಣೆಯಾಗಿದೆ ಆದರೆ ವಾಟ್ಸ್ ಆಪ್ ಗಳಲ್ಲಿ ವೈರಲ್ ಆಗತೊಡಗಿದೆ. ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ನಿಧನವನ್ನು ಸಂಭ್ರಮಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಲಿ ಅಕ್ಬರ್ ವಿಡಿಯೋದಲ್ಲಿ ಆಗ್ರಹಿಸಿದ್ದರು.