ಬೆಂಗಳೂರು, ಡಿ.11 (DaijiworldNews/PY): ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸರ್ಕಾರದ ಚಿಂತನೆ ಹಿನ್ನೆಲೆ ಕ್ರಿಶ್ಚಿಯನ್ ಧರ್ಮದ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದು, ಮತಾಂತರ ನಿಷೇಧ ಕಾಯ್ದೆ ಬೇಡ ಎಂದು ಮನವಿ ಸಲ್ಲಿಸಿದೆ.
ರೊನಾಲ್ಡ್ ಕೊಲಾಸೊ ನೇತೃತ್ವದ ನಿಯೋಗದಲ್ಲಿ ಮಾಜಿ ಪರಿಷತ್ ಸದಸ್ಯ ಐವಾನ್ ಡಿಸೋಜ, ಮಾಜಿ ಶಾಸಕ ಜೆ ಆರ್ ಲೋಬೊ, ಕಾಂಗ್ರೆಸ್ ನಾಯಕ ರಾಧಾಕೃಷ್ಣ ಅವರು ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ನಿವಾಸಕ್ಕೆ ಭೇಟಿ ನೀಡಿದರು.
ಈ ಸಂದರ್ಭ ಅವರು, ಕರ್ನಾಟಕದಲ್ಲಿನ ಕ್ರೈಸ್ತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವಂತೆ ಮನವಿ ಸಲ್ಲಿಸಿದ್ದಾರೆ.
ಬಳಿಕ ಮಾತನಾಡಿದ ರೊನಾಲ್ಡ್ ಕೊಲಾಸೊ ಅವರು, "ಕಳೆದ ಹತ್ತು ವರ್ಷ ನಮ್ಮ ಸಮುದಾಯದ ಅನುಪಾತ ಕಡಿಮೆಯಾಗಿದೆ. ಆದರೆ, ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ. ಈ ರೀತಿಯಾಗಿ ಬಿಂಬಿಸುವುದು ಸೂಕ್ತವಲ್ಲ. ಸಮಾಜದಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಕಲ್ಪಿಸಿ. ನಮ್ಮ ಮೇಲಾಗುತ್ತಿರುವ ದಾಳಿಯನ್ನು ತಪ್ಪಿಸಿ ಎಂದು ಮನವಿ ಸಲ್ಲಿಸಿದ್ದು, ಎಲ್ಲವನ್ನು ಸರಿಪಡಿಸುತ್ತೇವೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ ಎಂದಿದ್ದಾರೆ.