ನವದೆಹಲಿ, ಡಿ.11 (DaijiworldNews/PY): "ತೀರ್ಪಿನ ಸಂದರ್ಭದಲ್ಲಿ ನಾನು ಪೋಸ್ಟರ್ ಬಾಯ್ ಆಗಿರಲಿಲ್ಲ. ಆದರೆ, ಈಶಾನ್ಯ ಜನರ ಟೀಕೆಗಳಿಂದ ನಾನು ಪಂಚಿಂಗ್ ಬ್ಯಾಗ್ ಆಗಿದ್ದೇನೆ" ಎಂದು ಅಯೋಧ್ಯೆಯ ರಾಮಮಂದಿರದ ಐತಿಹಾಸಿಕ ತೀರ್ಪು ನೀಡಿದ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ರಂಜನ್ ಗೊಗೊಯ್ ಅವರು ಇತ್ತೀಚೆಗೆ ಬರೆದ ಜಸ್ಟೀಸ್ ಫಾರ್ ಜಡ್ಜ್ ಪುಸ್ತಕದ ಬಗ್ಗೆ ಮಾತನಾಡಿದರು.
"ಈ ಪುಸ್ತಕದ ಮೂಲಕ ನಾನು ಯಾವುದೇ ನ್ಯಾಯವನ್ನು ಹುಡುಕಿಲ್ಲ. ಬದಲಾಗಿ ಜನರಿಗೆ ನ್ಯಾಯಾಧೀಶರ ಕುರಿತು ತಿಳಿಸಲು ಪ್ರಯತ್ನಿಸಿದ್ದೇನೆ. ನ್ಯಾಯಾಧೀಶರನ್ನು ಸಾರ್ವಜನಿಕ ಸೇವಕ ಅಥವಾ ರಾಜಕಾರಣಿ ಎಂದು ನೋಡಬೇಡಿ" ಎಂದಿದ್ದಾರೆ.
"ನ್ಯಾಯಾಧೀಶರನ್ನು ಜನರು ಟೀಕಿಸಿದರೆ ಸಂಸ್ಥೆಗೆ ಹಾನಿಯಾಗುತ್ತದೆ. ಅದಕ್ಕೆ ನ್ಯಾಯಾಧೀಶರನ್ನು ಟೀಕಿಸಬಾರದು. ಜನರ ಟೀಕೆಗಳಿಗೆ ನ್ಯಾಯಾಧೀಶರು ವೇದಿಕೆಯಲ್ಲಿ ಉತ್ತರಿಸುತ್ತಾರೆ. ಆದರೆ, ಯಾವಾಗಲು ನ್ಯಾಯಾಧೀಶರು ಮಾತ್ರ ಮೌನವಾಗಿರುತ್ತಾರೆ. ಆತ ಶಿಸ್ತನ್ನು ಪಾಲಿಸುತ್ತಾನೆ ಎನ್ನುವುದು ಇದರರ್ಥ" ಎಂದು ತಿಳಿಸಿದ್ದಾರೆ.
"ಯಾವುದೇ ಪಕ್ಷ, ಅಭಿಪ್ರಾಯ, ವೈಯುಕ್ತಿಕ ಆಸಕ್ತಿ ಇಲ್ಲದಿರುವ ಕಾರಣ ನ್ಯಾಯಾಧೀಶರಿಗೆ ತೀರ್ಪು ಬರೆಯುವುದು ಸುಲಭವಾಗಿರುತ್ತದೆ. ಸತ್ಯದ ಮೇಲೆ ಪ್ರಕರಣಗಳನ್ನು ನಿರ್ಣಯಿಸಲಾಗುತ್ತದೆ. ನನ್ನ ಪ್ರಕಾರ ತೀರ್ಪನ್ನು ನೀಡುವುದು ಅತ್ಯಂತ ಸುಲಭದ ಕೆಲಸ" ಎಂದಿದ್ದಾರೆ.