ನವದೆಹಲಿ, ಡಿ.11 (DaijiworldNews/PY): "ಕೆಲವೊಮ್ಮೆ ಕೊರೊನಾ ಲಸಿಕೆ ಪ್ರಮಾಣಪತ್ರಗಳನ್ನು ತಪ್ಪಾಗಿ ವಿತರಿಸಿರುವ ಪ್ರಕರಣಗಳು ವರದಿಯಾಗಿರುವುದು ಸತ್ಯ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಒಪ್ಪಿಕೊಂಡಿದ್ದು, ಡಾಟಾ ಎಂಟ್ರಿ ಲೋಪಗಳ ಕಾರಣದಿಂದ ಕೆಲವೊಮ್ಮೆ ಹೀಗಾಗಿದೆ" ಎಂದು ಸಚಿವಾಲಯ ತಿಳಿಸಿದೆ.
ಈ ಬಗ್ಗೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಖಾತೆ ಸಚಿವೆ ಭಾರತಿ ಪ್ರವೀಣ್ ಪವಾರ್ ಅವರು ಲೋಕಸಭೆಗೆ ಮಾಹಿತಿ ನೀಡಿದ್ದು, "ಕೆಲವೊಂದು ಪ್ರತ್ಯೇಕ ಸಂದರ್ಭಗಳಲ್ಲಿ ಲಸಿಕೆ ಪಡೆದವರಿಗೆ, ಮೃತಪಟ್ಟವರ ಹೆಸರಿನಲ್ಲಿ ಪ್ರಮಾಣಪತ್ರ ನೀಡಿದ ಉದಾಹರಣೆಗಳಿವೆ" ಎಂದಿದ್ಧಾರೆ.
ಕೊರೊನಾ ಲಸಿಕೆ ಪ್ರಮಾಣಪತ್ರ ನೀಡಿಕೆಯಲ್ಲಿನ ಲೋಪಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಸರ್ಕಾರವನ್ನು ಪ್ರಶ್ನಿಸಿದ್ದರು.
"ಎರಡನೇ ಡೋಸ್ ಲಸಿಕೆ ನೀಡುವ ಸಂದರ್ಭ ಸಿಬ್ಬಂದಿಯು ಮಾಡಿದ ಅಜಾಗರೂಕ ಡಾಟಾ ಎಂಟ್ರಿಗಳಿಂದಾಗಿ ಈ ರೀತಿಯಾದ ಪ್ರಮಾದಗಳಾಗಿವೆ" ಎಂದಿದ್ದಾರೆ.
ಬಿಹಾರದ ಅರವಲ್ ಜಿಲ್ಲೆಯ ಗ್ರಾಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಟ ಅಕ್ಷಯ್ ಕುಮಾರ್ ಸೇರಿದಂತೆ ಹಲವು ಗಣ್ಯರ ಹೆಸರಿನಲ್ಲಿ ಆರ್ಟಿಪಿಸಿಆರ್ ಪರೀಕ್ಷೆ ಹಾಗೂ ಕೊರೊನಾ ಲಸಿಕೆ ನೀಡಿದ ಕುರಿತು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಭ್ಯವಾದ ಪಟ್ಟಿಯಿಂದ ತಿಳಿದುಬಂದಿತ್ತು.