ನವದೆಹಲಿ, ಡಿ 10(DaijiworldNews/MS): ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಅಪಘಾತದ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು. ದುರಂತದ ಬಗ್ಗೆ ಊಹಾಪೋಹಗಳನ್ನು ನಿಲ್ಲಿಸಬೇಕು ಎಂದು ಭಾರತೀಯ ವಾಯುಪಡೆಯುವ ಶುಕ್ರವಾರ ಮನವಿ ಮಾಡಿದೆ.
ಡಿಸೆಂಬರ್ 8ರಂದು ಸಂಭವಿಸಿದ ಹೆಲಿಕಾಪ್ಟರ್ ದುರಂತದ ಕಾರಣದ ತನಿಖೆಗಾಗಿ ಭಾರತೀಯ ವಾಯುಪಡೆಯು ಮೂರೂ ಸೇನೆಗಳ ಸದಸ್ಯರು ಇರುವ ಸಮಿತಿ ರಚಿಸಿದೆ. ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುತ್ತದೆ. ಸತ್ಯವನ್ನೂ ಹೊರತರಲಾಗುತ್ತದೆ. ಅಲ್ಲಿಯವರೆಗೆ, ಮಡಿದವರ ಘನತೆಯನ್ನು ಕಾಪಾಡಲು, ಮಾಹಿತಿ ಇಲ್ಲದ ಊಹಾಪೋಹಗಳನ್ನು ತಡೆಯಬೇಕು,’ ಎಂದು ವಾಯುಪಡೆಯ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಶುಕ್ರವಾರ ಟ್ವೀಟ್ ಮಾಡಲಾಗಿದೆ.
ಬುಧವಾರದ ಘಟನೆಯ ಕುರಿತು ತನಿಖೆ ನಡೆಸಲು ಐಎಎಫ್ ತ್ರಿ-ಸೇವಾ ನ್ಯಾಯಾಲಯವನ್ನು ಸ್ಥಾಪಿಸಿದೆ. ಪ್ರಕರಣದ ತನಿಖೆಯನ್ನು ಮೂರೂ ಸೇನೆಗಳ ಸದಸ್ಯರು ಇರುವ ಸಮಿತಿ ನಡೆಸಲಿದ್ದು ಇದರ ನೇತೃತ್ವವನ್ನು ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ವಹಿಸಲಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನೀಡಿದ ಹೇಳಿಕೆಯಲ್ಲಿ ಪ್ರಕಟಿಸಿದ್ದಾರೆ.