ಹೈದರಾಬಾದ್, ಡಿ.10 (DaijiworldNews/HR): ಹೈದರಾಬಾದಿನ ರಾಜೇಂದ್ರ ನಗರದಲ್ಲಿ ಹೆಂಡತಿ ಮೇಲೆ ಅನುಮಾನಗೊಂಡ ಪತಿಯೊಬ್ಬ ರಾತ್ರಿ ನಿಧಿಸುವ ಸಮಯದಲ್ಲಿ ಪತ್ನಿಯನ್ನು ಕೊಂದು ದೇಹದಿಂದ ತಲೆಯನ್ನು ಬೇರ್ಪಡಿಸಿ ತುಂಡರಿಸಿದ ಘಟನೆ ನಡೆದಿದೆ.
ಆರೋಪಿ ಫರ್ವೇಜ್ ಎಂಬಾತ 14 ವರ್ಷಗಳ ಹಿಂದೆ ಸಮ್ರಿನ್ ಬೇಗಂ ಎನ್ನುವ ಯುವತಿಯನ್ನು ವಿವಾಹವಾಗಿದ್ದ. ಆದರೆ ಗಂಡನ ಹಿಂಸೆ ತಾಳಲಾಗದೆ ಸಮ್ರಿನ್ ಬೇಗಂ ಈ ಮೊದಲೇ ವಿಚ್ಚೇದನ ಪಡೆದು ಬೇರೆಯಾಗಿದ್ದರು. ಈ ನಡುವೆ ಕಳೆದ ವರ್ಷ ಇಬ್ಬರೂ ಬಾಳಬೇಕೆಂದು ನಿರ್ಧರಿಸಿ ಮತ್ತೆ ಮದುವೆ ಮಾಡಿಕೊಂಡಿದ್ದು, ಅಂದಿನಿಂದಲೂ ಹೆಂಡತಿ ಮೇಲೆ ಅನುಮಾನ ಶುರುವಾಗಿತ್ತು.
ಇನ್ನು ಇದೇ ವಿಚಾರವಾಗಿ ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಿದ್ದು, ಹೆಂಡತಿ ನಿದ್ರೆಯಲ್ಲಿದ್ದ ವೇಳೆ ಕತ್ತಿಯಿಂದ ದಾಳಿ ಮಾಡಿದ್ದಾನೆ. ಇಷ್ಟಕ್ಕೆ ಆತನ ಕೋಪ ತೀರದೆ ಆಕೆಯ ದೇಹದಿಂದ ತಲೆಯನ್ನು ಬೇರ್ಪಡಿಸಿ, ಪಕ್ಕದಲ್ಲೇ ಇದ್ದ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ ಎನ್ನಲಾಗಿದೆ.
ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ.