ಚೆನ್ನೈ, ಡಿ 10(DaijiworldNews/MS): ಬುಧವಾರದಂದು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಸೇರಿದಂತೆ ಇತರ 13 ಮಂದಿ ಸಾವಿಗೀಡಾದ ಕೂನೂರ್ ಹೆಲಿಕಾಪ್ಟರ್ ಅಪಘಾತದ ಕುರಿತು ಪೋಸ್ಟ್ ಮಾಡಿದ ವಿವಾದಾತ್ಮಕ ಟ್ವೀಟ್ಗೆ ಸಂಬಂಧಿಸಿದಂತೆ ಯೂಟ್ಯೂಬರ್ ಮರಿದಾಸ್ ಅವರನ್ನು ಮಧುರೈನಲ್ಲಿ ಸೈಬರ್ ಕ್ರೈಂ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಡಿಎಂಕೆ ಆಡಳಿತದಲ್ಲಿ ತಮಿಳುನಾಡು ಕಾಶ್ಮೀರವಾಗಿ ಬದಲಾಗುತ್ತಿದೆಯೇ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದ ಮರಿದಾಸ್, ನಂತರ ಅದನ್ನು ಡಿಲೀಟ್ ಮಾಡಿದ್ದರು.ಬುಧವಾರದ ಸೇನಾ ಹೆಲಿಕಾಪ್ಟರ್ ದುರಂತದ ಹಿಂದೆ ಕಾಣದ ಕೈಗಳಿವೆ ಎಂದು ತೋರುತ್ತಿದೆ. ದೇಶಕ್ಕೆ ನಿಷ್ಠೆ ಇಲ್ಲದ ಜನರು ಒಗ್ಗೂಡಿದಾಗ ಸಂಚು ರೂಪಿಸುವ ಸಾಧ್ಯತೆಗಳಿವೆ ಮತ್ತು ಪ್ರತ್ಯೇಕತಾವಾದಿ ಶಕ್ತಿಗಳನ್ನು ತಡೆಯಬೇಕು ಎಂದು ಮರಿದಾಸ್ ಟ್ವೀಟ್ ಮಾಡಿದ್ದರು.
ವಿವಾದಾತ್ಮಕ ಟ್ವೀಟ್ ಬಳಿಕ ಮದುರೈ ಪೊಲೀಸರು ಕೆ ಪುದೂರಿನ ಸೂರ್ಯ ನಗರದಲ್ಲಿರುವ ಮರಿದಾಸ್ ಅವರ ಮನೆಗೆ ತೆರಳಿದಾಗ ಬಿಜೆಪಿ ಸದಸ್ಯರು ಸ್ಥಳದಲ್ಲಿ ಜಮಾಯಿಸಿ, ಅವರನ್ನು ಬಂಧಿಸದಂತೆ ಒತ್ತಾಯಿಸಿದರು. ಆದರೆ ಪೊಲೀಸರು ಸ್ವಲ್ಪ ಕಷ್ಟಪಟ್ಟು ಕೆ ಪುದೂರು ಠಾಣೆಗೆ ಕರೆದೊಯ್ದರು, ಅಲ್ಲಿ ಮತ್ತೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮರಿದಾಸ್ ವಿರುದ್ಧ ಸೈಬರ್ ಕ್ರೈಂ ಪೊಲೀಸರು ಐಪಿಸಿ ಸೆಕ್ಷನ್ 153 (ಎ), 504, 505 (ii), 505 (i) (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸ್ ಕಸ್ಟಡಿಯಿಂದ ಬಿಡುಗಡೆಯಾದ ನಂತರ ರಾಮನಾಥಪುರದ ಮಣಿಕಂದನ್ ಸಾವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಮರಿದಾಸ್ ಮತ್ತೊಂದು ವಿವಾದಾತ್ಮಕ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.