ಕೊಯಮತ್ತೂರು, ಡಿ. 09 (DaijiworldNews/SM): ಬುಧವಾರದಂದು ದುರಂತಕ್ಕೀಡಾಗಿ ನಿಧನರಾದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ ಹದಿಮೂರು ಮಂದಿಯ ಪಾರ್ಥೀವ ಶರೀರಗಳನ್ನು ಹೊತ್ತೊಯ್ಯುತ್ತಿದ್ದ ಆಂಬ್ಯುಲೆನ್ಸ್ ವೊಂದು ಮೆಟ್ಟುಪಾಳ್ಯಂ ಬಳಿ ಅಪಘಾತಕ್ಕೀಡಾದ ಘಟನೆ ನಡೆದಿದೆ.
13 ಮಂದಿಯ ಮೃತದೇಹಗಳನ್ನು ನೀಲಗಿರಿಯ ಎಂಆರ್ ಸಿ ಬ್ಯಾರಕ್ಸ್ ಚೌಕದಿಂದ ಸೂಲೂರು ವಾಯುನೆಲೆಗೆ ಆಂಬ್ಯುಲೆನ್ಸ್ ಮೂಲಕ ರವಾನಿಸಲಾಗುತ್ತಿತ್ತು. ಬೆಂಗಾವಲು ಪಡೆಯ ವಾಹನದೊಂದಿಗೆ ಆಂಬ್ಯುಲೆನ್ಸ್ ಗಳು ಸಂಚರಿಸುತ್ತಿದ್ದವು. ಈ ಸಂದರ್ಭದಲ್ಲಿ ಆಂಬ್ಯುಲೆನ್ಸ್ ವೊಂದು ಅಪಘಾತಕ್ಕೀಡಾಗಿದೆ. ತಕ್ಷಣ ಇತರ ಆಂಬ್ಯುಲೆನ್ಸ್ ಗಳಲ್ಲಿದ್ದವರು ಹಾಗೂ ಬೆಂಗಾವಲು ಪಡೆಯ ವಾಹನದಲ್ಲಿದ್ದವರು ಸಹಾಯಕ್ಕೆ ಧಾವಿಸಿದ್ದಾರೆ.
ಅಪಘಾತಕ್ಕೀಡಾದ ಆಂಬ್ಯುಲೆನ್ಸ್ ನಲ್ಲಿದ್ದ ಸಿಬ್ಬಂದಿಗಳು ಸಣ್ಣಪುಟ್ಟ ಗಾಯಗೊಂಡಿದ್ದು ಸ್ಥಳದಲ್ಲೇ ಅವರಿಗೆ ಪ್ರಥಮ ಚಿಕಿತ್ಸೆ ಒದಗಿಸಲಾಗಿದೆ. ಇನ್ನು ಅಪಘಾತಕ್ಕೀಡಾದ ಆಂಬ್ಯುಲೆನ್ಸ್ ನಲ್ಲಿದ ಪಾರ್ಥೀವ ಶರೀರವನ್ನು ಮತ್ತೊಂದು ಆಂಬ್ಯುಲೆನ್ಸ್ ಗೆ ಸ್ಥಳಾಂತರಿಸಿ ಬಳಿಕ ವಿಮಾನ ನಿಲ್ದಾಣಕ್ಕೆ ರವಾನಿಸಲಾಗಿದೆ.