ನವದೆಹಲಿ, ಡಿ.09 (DaijiworldNews/SM): ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ಹುತಾತ್ಮರಾದ ಘಟನೆ ದೇಶವನ್ನೇ ಆಘಾತಕ್ಕೆ ಒಳಪಡಿಸಿದೆ. ಬುಧವಾರದಂದು ನಡೆದ ಘಟನೆಯಲ್ಲಿ 13 ಮಂದಿ ಜೀವಂತವಾಗಿ ಸುಟ್ಟು ಶವವಾಗಿದ್ದರು. ಇಂತಹ ಕರಾಳ ಘಟನೆಗಳು ಈ ಹಿಂದೆಯೂ ಇತಿಹಾಸದ ಪುಟಗಳನ್ನು ಕೆದಕಿದಂತೆ ಸಿಗುತ್ತವೆ.
ಈ ಹಿಂದೆ ನಡೆದ ಹೆಲಿಕಾಪ್ಟರ್ ದುರಂತವೊಂದರಲ್ಲಿ ಸೇನೆಯ ಆರು ಮಂದಿ ಮೃತಪಟ್ಟಿದ್ದರು. ನಿನ್ನೆಯ ಘಟನೆಯಲ್ಲಿ ಸೇನೆಯ ಮೂರು ವಿಭಾಗಗಳ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಹುತಾತ್ಮರಾಗಿದ್ದಾರೆ. ಅವರ ಜೊತೆ ಇತರ 12 ಮಂದಿ ಸಾವನ್ನಪ್ಪಿದ್ದು, ಓರ್ವ ಮಾತ್ರ ಬದುಕುಳಿದಿದ್ದಾರೆ.
ಸಂಜಯ್ ಗಾಂಧಿ:
ಇತಿಹಾಸ ಪುಟಗಳನ್ನು ತಿರುಚಿದಾಗ 1980ರ ವಿಮಾನ ಅಪಘಾತದಲ್ಲಿ ಕಾಂಗ್ರೆಸ್ ಸಂಸದ ಸಂಜಯ್ ಗಾಂಧಿ ಸಾವನ್ನಪ್ಪಿದ ಘಟನೆ ನೆನಪಿಸುತ್ತದೆ.
ವೈಎಸ್ ರಾಜಶೇಖರ್ ರೆಡ್ಡಿ:
ಆಂಧ್ರ ಪ್ರದೇಶದ ಮಾಜಿ ಸಿಎಂ ವೈಎಸ್ ರಾಜಶೇಖರ್ ರೆಡ್ಡಿ 2009ರಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾಗಿದ್ದರು. ಕಾಡಿನ ಮಧ್ಯೆ ಮೂರು ದಿನಗಳ ಬಳಿಕ ಅವರ ಮೃತದೇಹ ಪತ್ತೆಹಚ್ಚಲಾಗಿತ್ತು.
ದೋರ್ಜಿ ಖಂಡು:
ಅರುಣಾಚಲದ ಮಾಜಿ ಸಿಎಂ ದೋರ್ಜಿ ಖಂಡು ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ 2011ರಲ್ಲಿ ಅಪಘಾತಕ್ಕೀಡಾಗಿ ಅವರು ದುರಂತ ಅಂತ್ಯಕಂಡಿದ್ದರು.
ಜಿ.ಎಂ.ಸಿ. ಬಾಲಯೋಗಿ
ಲೋಕಸಭೆಯ ಮಾಜಿ ಸ್ಪೀಕರ್ ಜಿ.ಎಂ.ಸಿ. ಬಾಲಯೋಗಿ-2002ರ ಹೆಲಿಕಾಪ್ಟರ್ ದುರಂತದಲ್ಲಿ ಮೃತರಾಗಿದ್ದರು.
ಮಾಜಿ ಸಚಿವ ಮಾಧವರಾವ್ ಸಿಂಧಿಯಾ- 2001ರ ವಿಮಾನ ಸ್ಪೋಟದಲ್ಲಿ ಸಾವನ್ನಪ್ಪಿದ್ದರು. ಎಸ್.ಮೋಹನ್ ಕುಮಾರಮಂಗಲಂ-1973ರ ವಿಮಾನ ದುರಂತದಲ್ಲಿ ಸಾವಿಗೀಡಾಗಿದ್ದರು.
ನಟಿ ಸೌಂದರ್ಯ-2004ರಲ್ಲಿ ಬೆಂಗಳೂರಿನಲ್ಲಿ ವಿಮಾನ ದುರಂತದಲ್ಲಿ ಮೃತಪಟ್ಟಿದ್ದರು. ಭಾರತ ಪರಮಾಣು ಯೋಜನೆಯ ಪಿತಾಮಹಾ ಹೋಮಿ ಜಹಂಗೀರ್ ಬಾಬಾ ಅವರು, 1966ರ ವಿಮಾನ ದುರಂತದಲ್ಲಿ ಸಾವಿಗೀಡಾಗಿದ್ದರು. ಹರ್ಯಾಣದ ಇಂಧನ ಸಚಿವ ಒ.ಪಿ.ಜಿಂದಾಲ್, ಕೃಷಿ ಸಚಿವ ಸುರೇಂದ್ರ ಸಿಂಗ್- 2005ರ ದುರಂತದಲ್ಲಿ ಸಾವನ್ನಪ್ಪಿದ್ದರು. ಬಾಲ ನಟಿ ತರುಣಿ ಸಚ್ದೇವ್: 2012ರಲ್ಲಿ ನಡೆದ ವಿಮಾನ ದುರಂತದಲ್ಲಿ ಮೃತಪಟ್ಟಿದ್ದರು.