ಬೆಂಗಳೂರು, ಡಿ.09 (DaijiworldNews/PY): "ಸದ್ಯಕ್ಕೆ ನೈಟ್ ಕರ್ಫ್ಯೂ, ಶಾಲೆ ಮುಚ್ಚುವ ಬಗ್ಗೆ ಯಾವುದೇ ತೀರ್ಮಾನವಿಲ್ಲ. ಕ್ರಿಸ್ಮಸ್, ಹೊಸ ವರ್ಷಗಳ ಆಚರಣೆಯ ಬಗ್ಗೆ ಮುಂದಿನ ಒಂದು ವಾರದ ಬಳಿಕ ತೀರ್ಮಾನ ಪ್ರಕಟಿಸಲಾಗುತ್ತದೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಸದ್ಯಕ್ಕೆ ಸಲಹಾ ಸಮಿತಿ ನೀಡಿರುವ ಮಾಹಿತಿಯಂತೆ ಅಷ್ಟೇನು ಕೊರೊನಾ, ಓಮ್ರಿಕಾನ್ ವೈರಸ್ ಪ್ರಕರಣಗಳು ಭಯ ಹುಟ್ಟಿಸುವಂತೆ ಇಲ್ಲ. ಹಾಗಾಗಿ ಸದ್ಯಕ್ಕೆ ನೈಟ್ ಕರ್ಫ್ಯೂ, ಶಾಲೆ ಮುಚ್ಚುವ ಬಗ್ಗೆ ಯಾವುದೇ ತೀರ್ಮಾನವಿಲ್ಲ" ಎಂದಿದ್ದಾರೆ.
"ಈಗಾಗಲೇ ಗಡಿ ಭಾಗದಲ್ಲಿ ಇರುವ ಕಟ್ಟೆಚ್ಚರ ಮುಂದುವರಿಯಲಿದೆ. ಕೇರಳ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಹಾಗೂ ಲಸಿಕೆ ನೀಡುವ ಆದೇಶ ಮುಂದುವರಿಯಲಿದೆ" ಎಂದು ಹೇಳಿದ್ದಾರೆ.
"ಕ್ರಿಸ್ ಮಸ್ ಹಾಗೂ ಹೊಸ ವರ್ಷದ ಆಚರಣೆ ನಿರ್ಬಂಧ, ನೈಟ್ ಕರ್ಫ್ಯು ಜಾರಿ ಸಂಬಂಧ ಮುಂದಿನ ಒಂದು ವಾರ ಕಾದು ನೋಡಿ, ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸದ್ಯಕ್ಕೆ ಆ ರೀತಿಯ ತೀರ್ಮಾನ ತೆಗೆದುಕೊಂಡಿಲ್ಲ" ಎಂದಿದ್ದಾರೆ.
"ಹಾಸ್ಟೆಲ್ಗಳಿಗೆ ಹೊಸ ಮಾರ್ಗಸೂಚಿಗಳನ್ನು ನೀಡಿದ್ದಾರೆ. ಅಡುಗೆ ಸಿಬ್ಬಂದಿಗಳಿಗೆ ಎರಡು ಡೋಸ್ ಲಸಿಕೆ ನೀಡುವುದು ಸೇರಿದಂತೆ ಈಗಾಗಲೇ ಪ್ರಕಟಿತ ಮಾರ್ಗಸೂಚಿಯನ್ನು ಮುಂದುವರಿಸಿಕೊಂಡು ಹೋಗುವುದು" ಎಂದು ಹೇಳಿದ್ದಾರೆ.